ವಕೀಲರಿಂದ ಹಲ್ಲೆ: ಬೀದಿಗಿಳಿದ ದಿಲ್ಲಿ ಪೊಲೀಸ್

0
785

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.5: ತೀಸ್ ಹಝಾರಿ ಕೋರ್ಟಿನ ವಕೀಲರಿಂದ ಹಲ್ಲೆ ನಡೆದ ಘಟನೆಯನ್ನು ಪ್ರತಿಭಟಿಸಿ ದಿಲ್ಲಿ ಪೊಲೀಸರು ಬೀದಿಗಿಳಿದಿದ್ದಾರೆ. ದಿಲ್ಲಿ ಪೊಲೀಸ್ ಕೇಂದ್ರದಲ್ಲಿ ಪ್ಲೇಕಾರ್ಡ್ ಹಿಡಿದು ನೂರಾರು ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಡೆಸಿದರು. ಆರೋಪಿ ವಕೀಲರನ್ನು ಬಂಧಿಸುತ್ತೇವೆ. ಪ್ರತಿಭಟನೆಯಿಂದ ಹಿಂದೆ ಸರಿಯಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರೂ ಪೊಲೀಸರು ಪ್ರತಿಭಟನೆ ಮುಂದುವರಿಸಿದ್ದಾರೆ. ವಕೀಲರ ಬಂಧನವಾಗುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ ತೀಸ್ ಹಝಾರಿ ಕೋರ್ಟು ಸಮುಚ್ಚಯದಲ್ಲಿ ವಕೀಲರು ಮತ್ತು ದಿಲ್ಲಿ ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಅಡಿಶನಲ್ ಡೆಪ್ಯುಟಿ ಕಮಿಶನರ್‌ ಸಹಿತ ೨೧ ಪೊಲೀಸರು, ಎಂಟು ವಕೀಲರು, ಹಲವು ಪತ್ರಕರ್ತರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಘರ್ಷಣೆಯ ವೇಳೆ ಪೊಲೀಸ್ ಜೀಪ್ ಸಹಿತ ಹದಿನೇಳು ವಾಹನಗಳಿಗೆ ಬೆಂಕಿಯಿಡಲಾಗಿದೆ. ಗಾಯಾಳುಗಳಾದ ಇಬ್ಬರು ವಕೀಲರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಪಾರ್ಕಿಂಗ್‌ನ ಕುರಿತ ವಿವಾದವು ಗುಂಡು ಹಾರಾಟ, ವಾಹನಕ್ಕೆ ಬೆಂಕಿಯಿಡುವಿಕೆಯವರೆಗೆ ಮುಂದುವರಿಯಿತೆಂದು ಪೊಲೀಸರು ಹೇಳಿದ್ದಾರೆ.