ಸನ್ಮಾರ್ಗ ವಾರ್ತೆ
ಮುಂಬೈ,ನ.26: ನಾಳಿನ ವಿಶ್ವಾಸ ಮತ ಯಾಚನೆಗೆ ಕಾಯದೆ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದರು. ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ನೀಡಿ ಬೆಂಬಲ ನೀಡಲು ಸಾಧ್ಯವಿಲ್ಲ ಎಂದುದರಿಂದ ರಾಜೀನಾಮೆ ನೀಡಿದ್ದೇನೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು. ಅಜಿತ್ ಪವಾರ್ ಬೆಂಬಲ ಕೊಟ್ಟದ್ದರಿಂದಲೇ ಸರಕಾರ ರಚಿಸಲು ಬಿಜೆಪಿ ಮುಂದಾಯಿತು. ಅವರು ಮತ್ತು ಶರದ್ ಪವಾರ್ ಅಳಿಯ ಸದಾನಂದ ಸುಳೆ ನಡುವೆ ನಡೆದ ಚರ್ಚೆಯ ಕೊನೆಯಲ್ಲಿ ಅಜಿತ್ ರಾಜೀನಾಮೆ ನಿರ್ಧರಿಸಿ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಆದ್ದರಿಂದ ನಮ್ಮಲ್ಲೀಗ ಬೆಂಬಲವಿಲ್ಲ. ನಾವು ಪ್ರತಿಪಕ್ಷದ ಜವಾಬ್ದಾರಿ ಹೊರುತ್ತೇವೆ ಎಂದರು.
ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡುವ ಯಾವುದೇ ಮಾತುಕತೆ ನಡೆದಿರಲಿಲ್ಲ. ಆದರೂ ಅದು ಮುಖ್ಯಮಂತ್ರಿ ಸ್ಥಾನಕ್ಕೆ ಬಲೆ ಬೀಸಿತು. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಜೊತೆಗೆ ನಾವು ಯಾವುದೇ ರೀತಿಯಲ್ಲಿ ಶಾಸಕರನ್ನು ಹೊಂದಿಸುವ ಕೆಲಸಕ್ಕೆ ಇಳಿಯುವುದಿಲ್ಲ ಎಂದು ಮೊದಲೇ ತೀರ್ಮಾನಿಸಿದ್ದೆವು.ಆದ್ದರಿಂದ ನಾನು ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಪಢ್ನವಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದರೆ ಹೈಕಮಾಂಡಿನ ಆದೇಶದಂತೆ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.












