ಪೌರತ್ವ ತಿದ್ದುಪಡಿ ಮಸೂದೆ: ದೇಶದ ಮುಸ್ಲಿಮರೇ, ಇದು ನಿಮ್ಮ ವಿರೋಧಿಯಲ್ಲ- ಅಮಿತ್ ಷಾ

0
1253

ಸನ್ಮಾರ್ಗ ವಾರ್ತೆ-

ನವದೆಹಲಿ; ಡಿ. ಪೌರತ್ವ ತಿದ್ದುಪಡಿ ಮಸೂದೆಯ ವಿಷಯದಲ್ಲಿ ಭಾರತದಲ್ಲಿರುವ ಯಾವ ಮುಸ್ಲಿಮರು ಭಯಪಡಬೇಕಾಗಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಮಾತನಾಡುತ್ತಿದ್ದ ಅವರು, ಈ ಮಸೂದೆಯ ಬಗ್ಗೆ ನಿಮ್ಮಲ್ಲಿ ಯಾರಾದರೂ ಭೀತಿ ಮೂಡಿಸಲು ಯತ್ನಿಸಿದರೆ ಮುಸ್ಲಿಮರೇ ನೀವು ಅದಕ್ಕೆ ಕಿವಿಗೊಡಬೇಡಿ. ಸಂವಿಧಾನಕ್ಕೆ ಬದ್ಧವಾಗಿಯೇ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಸರಕಾರದ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಪೂರ್ತಿ ರಕ್ಷಣೆ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಯು ನಮ್ಮ ಪ್ರಣಾಳಿಕೆಯ ಒಂದು ಅಂಶವಾಗಿದೆ. ಅದಕ್ಕೆ ನಾವು ಈಗ ಕಾನೂನು ರೂಪವನ್ನು ನೀಡುತ್ತಿದ್ದೇವೆ. ಇದು ಪಾಕ್, ಬಾಂಗ್ಲಾ ಮತ್ತು ಅಫಘಾನ್ ನಿಂದ ಈ ದೇಶಕ್ಕೆ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಈ ದೇಶದ ಪೌರತ್ವವನ್ನು ಒದಗಿಸುವ ಒಂದು ಕಾನೂನಷ್ಟೇ ಆಗಿದೆ. ಇದು ಮುಸ್ಲಿಂ ವಿರೋಧಿಯಲ್ಲ ಎಂದವರು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ಮುಸ್ಲಿಮೇತರರ ಸಂಖ್ಯೆ ಶೇಕಡ 20 ರಷ್ಟು ಕಡಿಮೆಯಾಗಿದೆ. ಒಂದೋ ಅವರ ಹತ್ಯೆಯಾಗಿದೆ ಅಥವಾ ಅವರು ಆಶ್ರಯ ಕೋರಿ ಭಾರತಕ್ಕೆ ಬಂದಿರಬಹುದು ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದ್ದಾರೆ.