ಸನ್ಮಾರ್ಗ ವಾರ್ತೆ-
ನವದೆಹಲಿ: ಡಿ. 11- ಪೌರತ್ವ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರ ಪಡೆದುದಕ್ಕೆ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿಯವರು, ಈ ಬೆಳವಣಿಗೆ ಖಂಡನಾರ್ಹ ಮತ್ತು ಮಸೂದೆಯು ಕೋಮು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಇದು ಪಕ್ಷಪಾತ ಮತ್ತು ತಾರತಮ್ಯದ ಮಸೂದೆಯಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದಿರುವ ಮುಸ್ಲಿಮೇತರ ಎಲ್ಲಾ ವಿದೇಶಿ ವಲಸಿಗರಿಗೆ ಪೌರತ್ವ ನೀಡುವ ಮತ್ತು ಮುಸ್ಲಿಮರನ್ನು ಈ ಅವಕಾಶದಿಂದ ಹೊರಗಿಡುವ ಈ ಮಸೂದೆಯು ಸಂವಿಧಾನ ವಿರೋಧಿ. ಇದು ನಮ್ಮ ದೇಶದ ವೈವಿಧ್ಯತೆಯ ವಿರೋಧಿ. ಧರ್ಮದ ಆಧಾರದ ಮೇಲೆ ಜನರನ್ನು ಬೇರ್ಪಡಿಸಿ ಪೌರತ್ವ ನೀಡುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ ಮಾತ್ರವಲ್ಲದೇ ಮಾನವೀಯತೆಗೂ ವಿರುದ್ಧವಾಗಿದೆ ಎಂದವರು ಹೇಳಿದ್ದಾರೆ.
ಬಿಜೆಪಿಯಲ್ಲದೆ ಇತರ ಅನೇಕ ರಾಜಕೀಯ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸುತ್ತಿರುವುದು ಅತ್ಯಂತ ವಿಷಾದನೀಯ. ಅವು ತಮ್ಮ ಅಭಿಪ್ರಾಯವನ್ನು ಮರುಪರಿಶೀಲಿಸುವಂತೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಯನ್ನು ವಿರೋಧಿಸುವಂತೆ ನಾವು ಅವುಗಳನ್ನು ಕೋರುತ್ತೇವೆ. ಈ ಮಸೂದೆಯು ಈಗಾಗಲೇ ಅಂತರರಾಷ್ಟ್ರೀಯ ಗಮನಕ್ಕೆ ಬಂದಿದ್ದು, ಮಸೂದೆಯು ಕಾನೂನಾಗಿ ಪರಿವರ್ತನೆಯಾದರೆ ದೇಶದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಬಹುದು. ಶ್ರೀಲಂಕಾ ಮತ್ತು ಬರ್ಮಾದಂತಹ ದೇಶಗಳಲ್ಲಿನ ಮುಸ್ಲಿಂ ಅಲ್ಪಸಂಖ್ಯಾತರ ದುಃಸ್ಥಿತಿಯನ್ನು ನಿರ್ಲಕ್ಷಿಸುವ ಮೂಲಕ, ಪೌರತ್ವ ಮಸೂದೆಯು ತೀವ್ರ ಪಕ್ಷಪಾತೀ ಸ್ವಭಾವವನ್ನು ಪ್ರದರ್ಶಿಸಿದೆ. ಅಲ್ಲದೆ, ನಮ್ಮ ದೇಶವು ಧರ್ಮಾಂಧತೆ ಮತ್ತು ಇಸ್ಲಾಮೋಫೋಬಿಯಾದ ಶಕ್ತಿಗಳ ಮುಂದೆ ತಲೆಬಾಗಿರುವುದಕ್ಕೆ ಈ ಮಸೂದೆಯು ನಿದರ್ಶನವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ,
ಈ ಮಸೂದೆಯನ್ನು ತಿರಸ್ಕರಿಸುವಂತೆ ದೇಶದ ಎಲ್ಲ ನ್ಯಾಯಪ್ರಿಯ ನಾಗರಿಕರೊಂದಿಗೆ ನಾವು ಮನವಿ ಮಾಡುತ್ತೇವೆ. ಜಮಾಅತೆ-ಇಸ್ಲಾಮಿಯು ಸಾಂವಿಧಾನಿಕವಾಗಿ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮಸೂದೆಯನ್ನು ವಿರೋಧಿಸುವುದನ್ನು ಮುಂದುವರಿಸುತ್ತದೆ. ಬಿಜೆಪಿಯೇತರ ರಾಜಕೀಯ ಪಕ್ಷಗಳು ಪೌರತ್ವ ಮಸೂದೆಯ ಅಪಾಯಕಾರಿ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಸಂಸತ್ತಿನ ಮೇಲ್ಮನೆಯಲ್ಲಿ ಅದನ್ನು ವಿರೋಧಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಇದು ನ್ಯಾಯಕ್ಕಾಗಿ ಮತ್ತು ನಮ್ಮ ದೇಶದ ಆತ್ಮವನ್ನು ಕಾಪಾಡುವ ಹೋರಾಟವಾಗಿದೆ ಎಂದವರು ಹೇಳಿದ್ದಾರೆ.












