ಪೌರತ್ವ ಕಾನೂನು: ತಮಿಳ್ನಾಡಿನಲ್ಲಿ ರಾಜ್ಯಪಾಲರ ನೀತಿ ಘೋಷಣೆ ಬಹಿಷ್ಕರಿಸಿದ ಪ್ರತಿಪಕ್ಷ

0
856

ಸನ್ಮಾರ್ಗ ವಾರ್ತೆ-

ಚೆನ್ನೈ, ಜ. 7: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ಪ್ರತಿಭಟಿಸಿ ತಮಿಳ್ನಾಡಿನಲ್ಲಿ ರಾಜ್ಯಪಾಲ ಬನ್‍ವಾರಿಲಾಲ್ ಪುರೋಹಿತ್‍ರ ನೀತಿ ಘೊಷಣೆಯನ್ನು ಡಿಎಂಕೆ ನೇತೃತ್ವದ ಪ್ರತಿಪಕ್ಷ ಬಹಿಷ್ಕರಿಸಿ ಸಭಾತ್ಯಾಗ ಮಾಡಿದೆ. ಚಾಲ್ತಿ ವರ್ಷದ ಮೊದಲ ವಿಧಾನಸಭಾ ಅಧಿವೇಶನ ಸೋಮವಾರ ಬೆಳಗ್ಗೆ ರಾಜ್ಯಪಾಲರ ನೀತಿ ಘೋಷಣೆ ಭಾಷಣದೊಂದಿಗೆ ಆರಂಭವಾಯಿತು. ರಾಜ್ಯಪಾಲರು ಭಾಷಣ ಆರಂಭಿಸಿದ ಕೂಡಲೇ ಪ್ರತಿಪಕ್ಷ ನಾಯಕ ಎಂ ಕೆ ಸ್ಟಾಲಿನ್ ವಿವಿಧ ಸಮಸ್ಯೆಗಳನ್ನುಎತ್ತಿ ಎದ್ದು ನಿಂತರು. ಪ್ರತಿಪಕ್ಷ ನಾಯಕರಾದ ನೀವು ಒಳ್ಳೆಯ ಭಾಷಣ ನೀಡಿ, ತನ್ನ ಭಾಷಣದ ಬಳಿಕ ಎಲ್ಲ ಸಮಸ್ಯೆಗಳ ಕುರಿತು ಚರ್ಚೆ ನಡೆಸಬಹುದು. ಇದು ತನ್ನ ಮನವಿ ಎಂದು ರಾಜ್ಯಪಾಲರು ಹೇಳಿದರು. ಆದರೆ,

ದೇಶವಿಡೀ ಭಾರೀ ಪ್ರತಿಭಟನೆಗೆ ಕಾರಣವಾದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಸಭೆಯಲ್ಲಿ ಶೀಘ್ರ ಪ್ರಸ್ತಾವ ಪಾಸು ಮಾಡಬೇಕೆಂದು ಸ್ಟಾಲಿನ್ ಆಗ್ರಹಿಸಿದರು. ನಂತರ ಡೌನ್‍ಡೌನ್ ಸಿಎಎ ಎಂದು ಘೋಷಣೆ ಕೂಗಿ ಪ್ರತಿಪಕ್ಷ ಸಭಾತ್ಯಾಗ ಮಾಡಿತು. ನಂತರ ವಿಧಾನಸಭೆಯ ಹೊರಗೆ ಪತ್ರಕರ್ತರೊಡನೆ ಮಾತಾಡಿದ ಅವರು ಎಐಡಿಎಂಕೆ ಬೆಂಬಲದಲ್ಲಿ ತರಲಾದ ಪೌರತ್ವ ಕಾನೂನು ಜಾರಿಗೆ ಬಂದರೆ ದೇಶದ ಜಾತ್ಯತೀತ ಸ್ವಭಾವ, ಶಾಂತಿ ಕದಡಲಿದೆ ಎಂದರು. ನೋ ಸಿಎಎ, ಎನ್‍ಆರ್ ಸಿ, ಎನ್‍ಪಿಆರ್ ಎಂದು ಬರೆದ ಟೀಶರ್ಟ್ ಧರಿಸಿ ಡಿಎಂಕೆ ಶಾಸಕ ಹಾಗು ಮನಿತನೇಯ ಜನನಾಯಕ ಕಕ್ಷಿ ನಾಯಕ ತಮೀಮುನ್ ಅನ್ಸಾರಿ ಸದನಕ್ಕೆ ಬಂದಿದ್ದರು. ಜನವರಿ ಒಂಬತ್ತರವರೆಗೆ ವಿಧಾನಸಭಾ ಅಧಿವೇಶನ ನಡೆಯಲಿದೆ.