ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 7: ಜೆಎನ್ಯು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಮತ್ತು ಹಾಸ್ಟೆಲ್ಗಳಲ್ಲಿ ಎಬಿವಿಪಿ ನಡೆಸಿದ ದಾಂಧಲೆಯ ಕುರಿತು ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ದಾಳಿ ತಡೆಯುವಲ್ಲಿ ಲೋಪವೆಸಗಿದ ದಿಲ್ಲಿ ಪೊಲೀಸರು ಮತ್ತು ಗೃಹ ಸಚಿವಾಲಯ ಕಟಕಟೆಯಲ್ಲಿದೆ. ದುಷ್ಕರ್ಮಿಗಳ ಚಿತ್ರ ಸಹಿತ ಸ್ಪಷ್ಟವಾದ ಸೂಚನೆಗಳನ್ನು ನೀಡಿಯೂ ಈವರೆಗೆ ಯಾರನ್ನೂ ಬಂಧಿಸಿಲ್ಲ. ಕ್ಯಾಂಪಸ್ನೊಳಗೆ ಉದ್ರಿಕ್ತ ಸ್ಥಿತಿಯಿದೆ. ಪೊಲೀಸರು ಮತ್ತು ಗೃಹ ಸಚಿವಾಲಯ ಸೂಕ್ತ ಸಮಯದಲ್ಲಿ ಎಚ್ಚರವಾಗಲಿಲ್ಲವೆಂಬ ಆಕ್ಷೇಪ ಇದ್ದರೂ ಸಮಸ್ಯೆಯ ಪರಿಹಾರಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಜೆಎನ್ಯು ವಿದ್ಯಾರ್ಥಿಗಳು, ಅಧಿಕಾರಿಗಳೊಡನೆ ಮಾತಾಡುವಂತೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜ್ಗೆ ಸೂಚನೆಯನ್ನು ನೀಡಿದ್ದಾರೆ. ದಿಲ್ಲಿ ಪೊಲೀಸ ಕಮಿಶನರ್ ಅಮೂಲ್ಯ ಪಟ್ನಾಯ್ಕ್ರಿಂದ ವರದಿಯನ್ನು ಕೇಳಲಾಗಿದೆ. ಇದೇವೇಳೆ ಹಾಸ್ಟೆಲ್ನಲ್ಲಿ ದುಷ್ಕರ್ಮಿಗಳನ್ನು ತಡೆಯಲು ಅಸಾಧ್ಯವಾದುದಕ್ಕೆ ನೈತಿಕ ಜವಾಬ್ದಾರಿಯನ್ನು ಹೊತ್ತು ಸಬರ್ಮತಿ ಹಾಸ್ಟೆಲ್ ವಾರ್ಡನ್ ಆರ್. ಮೀನ ರಾಜೀನಾಮೆ ನೀಡಿದ್ದಾರೆ.
ಪೊಲೀಸರು ನೋಡುತ್ತಿದ್ದಂತೆಯೇ ಆರೋಪಿಗಳು ಆಯುಧಗಳೊಂದಿಗೆ ಕ್ಯಾಂಪಸ್ ಪ್ರವೇಶಿಸಿ ದಾಂಧಲೆ ಎಬ್ಬಿಸಿದ್ದರು. ಕ್ಯಾಂಪಸ್ ಒಳಗೆ ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆಯಾಗಿತ್ತು. ಸೋಮವಾರ ಕ್ಯಾಂಪಸ್ಗೆ ಭೇಟಿ ನೀಡಿದ ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಹೊರಗಿನವರು ಸೇರಿ ವಿದ್ಯಾರ್ಥಿಗಳಿಗೆ ಮಾರಾಣಾಂತಿಕವಾಗಿ ಹೊಡೆದಿದ್ದರು. ಪೊಲೀಸರು ತಡೆಯುವ ಯತ್ನ ಮಾಡಲಿಲ್ಲ ಎಂದು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಶಿ ಘೋಷ್ ಹೇಳಿದರು.
ದಾಳಿಗೆ ಮೌನ ಅನುಮತಿ ಕೊಟ್ಟ ಉಪಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಜೆಎನ್ಯು ಅಧ್ಯಾಪಕರ ಸಂಘಟನೆ ಜೆಎನ್ಯುಟಿಐ ಮತ್ತು ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. ಅಧ್ಯಾಪಕಿಯ ತಲೆಗೆ ಹೊಡೆದರೂ ಉಪಕುಲಪತಿ ಕ್ಯಾಂಪಸ್ಗೆ ಬಂದಿಲ್ಲ. ರವಿವಾರ ನಡೆದ ದಾಂಧಲೆಯಲ್ಲಿ ಇಬ್ಬರು ಅಧ್ಯಾಪಕರೂ ಸೇರಿ 25 ವಿದ್ಯಾರ್ಥಿಗಳು ಗಾಯಗಗೊಂಡಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಸಂಘಪರಿವಾರದ ಕಾರ್ಯಕರ್ತರು ಸೋಮವಾರ ಕ್ಯಾಂಪಸ್ನ ಹೊರಗೆ ವಿವಿಧ ಕಡೆಗಳಲ್ಲಿ ಘೋಷಣೆ ಕೂಗಿದ್ದರು. ಕ್ಯಾಂಪಸ್ ಒಳಗೆ ಅಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ರಾಲಿ ಮಾಡಿದರು. ಕಾಂಗ್ರೆಸ್, ಸಿಪಿಎಂ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಿಪಿಐ ಮೊದಲಾದ ವಿವಿಧ ಪ್ರತಿಪಕ್ಷ ಪಾರ್ಟಿಗಳ ನಾಯಕರು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಜೆಎನ್ಯು ಕ್ಯಾಂಪಸಿಗೆ ಬಂದರು.












