ಪೌರತ್ವ: ಮನೆ ಮನೆ ಜನಜಾಗೃತಿಗಾಗಿ ಬಂದ ಬಿಜೆಪಿ ಕಾರ್ಯಕರ್ತರನ್ನು ತಡೆದು ಮರಳಿ ಕಳುಹಿಸಿದ ಸ್ಥಳೀಯ ನಾಗರಿಕರು: ವೀಡಿಯೊ ವೈರಲ್

0
1876

ಸನ್ಮಾರ್ಗ ವಾರ್ತೆ-

ಹೊಸಪೇಟೆ: ಜ. 7-ಬಿಜೆಪಿಯ ಪೌರತ್ವ ಪರ ಜಾಗೃತಿ ಕಾರ್ಯಕ್ರಮಕ್ಕೆ ಇಲ್ಲಿನ ನಾಗರಿಕರು ತೀವ್ರ ಅಡ್ಡಿಪಡಿಸಿದ ಪ್ರಕರಣ ನಡೆದಿದೆ. ಇಲ್ಲಿನ ಚಲವಾದಿಕೇರಿಯ ದಲಿತರು, ವಾಲ್ಮೀಕಿ ನಾಯಕರು ಹಾಗೂ ಮುಸ್ಲಿಮರು ಜೊತೆ ಸೇರಿ ಪ್ರತಿರೋಧ ತೋರಿದ್ದರಿಂದ ಬಿಜೆಪಿಯ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನ ಸೋಮವಾರ ( ಜ. 6) ನಡೆಯಲಿಲ್ಲ ಎಂದು ತಿಳಿದುಬಂದಿದೆ.

ಬಿಜೆಪಿ ಮಂದಿ ಬಂದಿದ್ದಾರೆ ಎಂಬುದನ್ನು ಅರಿತು ಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬಂದ ಸ್ಥಳೀಯ ನಿವಾಸಿಗಳು, ‘ಗೋ ಬ್ಯಾಕ್‌’ ಎಂದು ಘೋಷಣೆ ಕೂಗಿದರಲ್ಲದೆ, ಕಪ್ಪು ಬಾವುಟ ಪ್ರದರ್ಶಿಸಿ, ಬಂದವರನ್ನು ತಡೆದರು. ‘ನಾವು ಕಾಯ್ದೆ ಕುರಿತು ತಿಳಿವಳಿಕೆ ಮೂಡಿಸಲು ಮತ್ತು ಕರಪತ್ರ ಹಂಚಲು ಬಂದಿದ್ದೇವೆ. ಅದನ್ನು ತಡೆಯುವ ಹಕ್ಕು ನಿಮಗಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿದ್ದು ಸ್ಥಳೀಯರನ್ನು ಸಿಟ್ಟಿಗೇರಿಸಿತು. ಅದಕ್ಕೆ ಸ್ಥಳೀಯರು, ‘ನೀವು ಇಲ್ಲಿಗೆ ಬಂದು ವಾತಾವರಣ ಹಾಳುಗೆಡವಬೇಡಿ. ಯಾವುದೇ ಕಾರಣಕ್ಕೂ ಕೇರಿಯೊಳಗೆ ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.ಎರಡೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆದು ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಅಲ್ಲಿಗೆ ಬಂದ ಎಚ್‌.ಎಲ್‌. ಸಂತೋಷ್‌, ಅಂಜುಮನ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್‌ ರಫಾಯ್‌, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಫಹೀಮ್‌ ಬಾಷಾ ಅವರು, ‘ಈಗ ವಾತಾವರಣ ಸರಿಯಿಲ್ಲ. ಈ ವೇಳೆ ಇಲ್ಲಿ ಅಭಿಯಾನ ನಡೆಸಿದರೆ ಪರಿಸ್ಥಿತಿ ಬಿಗಡಾಯಿಸಬಹುದು. ಇದರಿಂದ ಇಡೀ ಊರಿನ ನೆಮ್ಮದಿ ಹಾಳಾಗಬಹುದು’ ಎಂದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ, ಬಿಜೆಪಿಯವರನ್ನು ಅಲ್ಲಿಂದ ಕಳುಹಿಸಿದರು. ಅಲ್ಲದೆ, ಅರ್ಧಗಂಟೆಗೂ ಹೆಚ್ಚು ಕಾಲ ಎರಡೂ ಕಡೆಯವರು ಮುಖಾಮುಖಾಯಾಗಿ ನಿಂತು, ಘೋಷಣೆ ಕೂಗಿದ್ದರಿಂದ ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.