ಸನ್ಮಾರ್ಗ ವಾರ್ತೆ
ಫಿರೋಝಾಬಾದ್, ಜ. 15: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆಯ ವೇಳೆ ಪೊಲೀಸರು ಗುಂಡು ಹಾರಿಸಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಪ್ರತಿಭಟನೆಯಲ್ಲಿ ಫಿರೋಝಾ ಬಾದ್ ಜಿಲ್ಲೆಯಲ್ಲಿ ಗುಂಡೇಟಿನಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ಡಿಸೆಂಬರ್ 20ರಂದು ಫಿರೋಝಾಬಾದ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೂಲಿ ಕಾರ್ಮಿಕ ಮುಹಮ್ಮದ್ ಅಬ್ರಾರ್ (26) ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು.
ರಸೂಲ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಸ್ರೂರ್ಗಂಜ್ ಎಂಬಲ್ಲಿಯ ನಿವಾಸಿಯಾಗಿದ್ದು ದಿಲ್ಲಿ ಆಸ್ಪತ್ರೆಯಲ್ಲಿ ಅಬ್ರಾರ್ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ ಹತ್ತರಂದು ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ರವಿವಾರ ಇವರು ಮೃತಪಟ್ಟರು. ಪೋಸ್ಟ್ ಮಾರ್ಟಂ ವರದಿ ಸಿಕ್ಕಿದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಎಸ್ ಪಿ ಪ್ರತಾಪ್ ಸಿಂಗ್ ಹೇಳಿದರು. ಆದರೆ, ಕೆಲಸವನ್ನು ಮುಗಿಸಿ ಮನೆಗೆ ಮರಳುವಾಗ ಅಬ್ರಾರ್ ರಿಗೆ ಗುಂಡು ತಗಲಿದೆ ಎಂದು ಸಂಬಂಧಿಕರು ಹೇಳಿದ್ದಾರೆ.












