ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 25: ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಪೌರತ್ವ ತಿದ್ದುಪಡಿ ವಿರುದ್ಧ ಹೋರಾಟದಲ್ಲಿ ಪೊಲೀಸರನ್ನು ಉಪಯೋಗಿಸಿ ದಮನಿಸಲು ನೋಡಿದ ಉಪಕುಲಪತಿ, ರಿಜಿಸ್ಟ್ರಾರ್ ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳು ಬಲವಾಗಿ ಒತ್ತಾಯಿಸಿದ್ದಾರೆ. ಇಬ್ಬರೂ ರಾಜೀನಾಮೆ ನೀಡದೆ ವಿಶ್ವವಿದ್ಯಾನಿಲಯದೊಂದಿಗೆ ಸಹಕರಿಸಲಾರೆವು ಎಂದು ವಿದ್ಯಾರ್ಥಿಗಳು ತಿಳಿಸಿದ್ದು ಸಾಮೂಹಿಕವಾಗಿ ಪರೀಕ್ಷೆಯನ್ನು ಬಹಿಷ್ಕರಿಸಲು ತೊಡಗಿದ್ದಾರೆ.
ನೂರಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಪೊಲೀಸ್ ಕಾರ್ಯಾಚರಣೆಗೆ ಜವಾಬ್ದಾರರಾದ ಉಪಕುಲಪತಿ, ರಿಜಿಸ್ಟ್ರಾರ್ ರಾಜೀನಾಮೆ ನೀಡಬೇಕೆಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯೂನಿಯನ್ ಆಗ್ರಹಿಸಿದೆ. ಉಪಕುಲಪತಿ ಮತ್ತು ರಿಜಿಸ್ಟ್ರಾರ್ ರೊಂದಿಗೆ ವಿದ್ಯಾರ್ಥಿಗಳಿಗೆ ಅಸಮಾಧಾನ ತೀವ್ರವಾಗಿದೆ. ಅದರ ಶಮನಕ್ಕೆ ಚಳಿಗಾಲ ರಜೆ ಮತ್ತು ಪರೀಕ್ಷೆಗಳನ್ನು ಮುಂದೂಡಿದ್ದರೂ ಪ್ರಯೋಜನಾಗಿಲ್ಲ. ಮತ್ತೆ ಆರಂಭಗೊಂಡ ಪರೀಕ್ಷೆಗಳನ್ನು ಇಂಜಿನಿಯರಿಂಗ್-ಮೆಡಿಕಲ್ ವಿದ್ಯಾರ್ಥಿಗಳು ಬಹಿಷ್ಕರಿಸಿದ್ದಾರೆ. ವಿಶ್ವವಿದ್ಯಾನಿಲಯದ ಗಣರಾಜ್ಯೋತ್ಸವ ಸಮಾರಂಭವನ್ನು ಬಹಿಷ್ಕರಿಸಿ ಪ್ರತಿಭಟನಾ ಸ್ಥಳದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ. ಪೊಲೀಸ್ ದಾಳಿಯ ಮರು ದಿವಸ ಹಾಸ್ಟೆಲ್ ಮುಚ್ಚಿದ್ದರಿಂದ ಊರಿಗೆ ಹೋದ ವಿದ್ಯಾರ್ಥಿಗಳಲ್ಲಿ ಹಲವರು ಮರಳುತ್ತಿದ್ದಾರೆ. ಸೋಮವಾರ 22,000 ವಿದ್ಯಾರ್ಥಿಗಳು ಕ್ಯಾಂಪಸ್ಗೆ ಬಂದರು. ಪುನಃ ಪ್ರತಿಭಟನೆ ತೀವ್ರಗೊಳ್ಳಬಹುದೆಂಬ ಆತಂಕದಲ್ಲಿ ಡೀನ್ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದಾಗ ಉಪಕುಲಪತಿ ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳು ಬಲವಾಗಿ ಒತ್ತಾಯಿಸಿ ತಮ್ಮ ನಿಲುವನ್ನು ದೃಢಪಡಿಸಿದ್ದಾರೆ.












