ಸನ್ಮಾರ್ಗ ವಾರ್ತೆ
ಕೊಚ್ಚಿ, ಜ. 29: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದೇಶಾದ್ಯಂತ ಇನ್ನೂಹೆಚ್ಚಿನ ಕಡೆ ಪ್ರತಿಭಟನೆಗಳು ವ್ಯಾಪಿಸಬೇಕೆಂದು ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ. ಶಾಹಿನ್ ಬಾಗ್ನಲ್ಲಿ ಮಹಿಳೆಯರ ನೇತೃತ್ವದಲ್ಲಿ ನಡೆಯುವ ಹೋರಾಟ ಇತಿಹಾಸದ ಮೈಲುಗಲ್ಲು. ಇದಕ್ಕೆ ಸಮಾನವಾದ ಪ್ರತಿಭಟನೆಗಳು ದೇಶಾದ್ಯಂತ ಏಳಬೇಕು. ಸಿಎಎ , ಎನ್ಆರ್ ಸಿ, ಎನ್ಪಿಆರ್ ವಿರುದ್ಧ ಪ್ರತಿಭಟನೆಗಾಗಿ ರೂಪು ನೀಡಿದ ವಿವಿಧ ಆಂದೋಲನದ ನಾಯಕರ ಒಕ್ಕೂಟವಾದ ಸಂವಿಧಾನ್ ಸುರಕ್ಷಾ ಆಂದೋಲನದ ಚಟುವಟಿಕೆಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಿದ್ದರು. ಅವರು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ರಫೇಲ್ ವ್ಯವಹಾರದ ದಾಖಲೆಗಳನ್ನು ತೋರಿಸಲು ಸಾಧ್ಯವಾಗದ ಸರಕಾರ ಜನರ ಪೌರತ್ವದ ದಾಖಲೆ ಕೇಳುತ್ತಿದೆ. ಮತ್ತೊಂದು ಲೋಕಸಭಾ ಚುನಾವಣೆ ನಡೆಯಬಾರದ ರೀತಿಯಲ್ಲಿ ದೇಶದ ಸ್ವರೂಪವನ್ನು ಬದಲಾಯಿಸಲಾಗುತ್ತಿದೆ. ಜನರ ಮತದಾನದ ಹಕ್ಕಿನ ಮೇಲೆ ಇದು ಬಾಧಕವಾಗಲಿದೆ. ದೇಶದ ಪ್ರಜೆಗಳಿಗೆ ಮತದಾನದ ಹಕ್ಕು ನಿರಾಕರಿಸಿ, ವಿದೇಶದ ಹಿಂದೂಗಳಿಗೆ ಅವರು ಹಿಂದೂಗಳೆಂಬ ಕಾರಣದಿಂದ ಮತದಾರರನ್ನಾಗಿ ಮಾಡಲಾಗುತ್ತಿದೆ. ಸರಕಾರವನ್ನು ಉಳಿಸಿಕೊಳ್ಳಲು ದ್ವಿಮುಖ ತಂತ್ರವನ್ನು ಇವರು ಹರಡುತ್ತಿದ್ದಾರೆ. ಸಂಘಪರಿವಾರದ ಕೆಟ್ಟ ಆಡಳಿತದಿಂದ ಭಾರತವನ್ನು ಬಿಡುಗಡೆಗೊಳಿಸಿ ಸಂವಿಧಾನವನ್ನು ಸಂರಕ್ಷಿಸುವುದು ಆಂದೋಲನದ ಉದ್ದೇಶವಾಗಿದೆ. ಫೆಬ್ರುವರಿ 12ಕ್ಕೆ ರಾಷ್ಟ್ರಪತಿ ಭವನಕ್ಕೆ ಜನತಾ ಮಾರ್ಚ್ ಆಯೋಜಿಸಲಾಗುವುದು.
ಇಎಂ ಅಬ್ದುರ್ರಹ್ಮಾನ್, ಕೇರಳದ ಸಂಘಟಕ ತುಳಸೀಧರನ್ ಪಳ್ಳಿಕಳ್ಳ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು












