ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಜ. 29: ಇಸ್ರೇಲಿನ ಅವಿಭಾಜ್ಯ ರಾಜಧಾನಿಯಾಗಿ ಜೆರುಸಲೇಂನ್ನು ಖಾಯಂಗೊಳಿಸಿ ಮಧ್ಯಪ್ರಾಚ್ಯದ ಶಾಂತಿ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ್ದಾರೆ. ಸಂಪೂರ್ಣ ಪ್ರಾಯೋಗಿಕ ದ್ವಿರಾಷ್ಟ್ರ ಪರಿಹಾರ ತನ್ನದು ಮತ್ತು ಯಾವನೇ ಇಸ್ರೇಲಿ, ಫೆಲಸ್ತೀನಿ ಅವರ ದೇಶದಿಂದ ಹೊರದಬ್ಬಲ್ಪಡಲಾರ ಎಂದು ಟ್ರಂಪ್ ಹೇಳಿದರು. ವೈಟ್ ಹೌಸ್ನಲ್ಲಿ ಇಸ್ರೇಲಿನ ಪ್ರಧಾನಿ ಬೆಂಜಿಮಿನ್ ನೆತನ್ಯಾಹು ಜೊತೆ ನಿಂತು ಅವರು ಈ ಘೋಷಣೆ ಮಾಡಿದ್ದು ಇದು ಫೆಲಸ್ತೀನಿಯರಿಗಿರುವ ಕೊನೆಯ ಅವಕಾಶವೆಂದು ಟ್ರಂಪ್ ಹೇಳಿದರು.
ಟ್ರಂಪ್ ಘೋಷಣೆಯನ್ನು ಫೆಲಸ್ತೀನ್ ಪಕ್ಷಪಾತಿ ಯೋಜನೆಯೆಂದು ಹೇಳಿ ತಿರಸ್ಕರಿಸಿದೆ. ಇಸ್ರೇಲ್ ಸ್ವಾಗತಿಸಿದೆ. ಟ್ರಂಪ್ ಅಳಿಯ ಜರಾದ್ ಕುಷ್ನರ್ ರ ಮೇಲ್ನೋಟದಲ್ಲಿ ಇದು ತಯಾರಾಗಿದೆ. ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರೊಂದಿಗೆ ಯೋಜನೆ ಚರ್ಚಿಸಲು ನೆತನ್ಯಾಹು ಬುಧವಾರ ಮಾಸ್ಕೋಗೆ ಹೋಗಲಿದ್ದಾರೆ. ಐತಿಹಾಸಿಕ ಮೈಲುಗಲ್ಲು ಇದೆಂದು ನೆತನ್ಯಾಹು ಪ್ರತಿಸ್ಪರ್ಧಿ ಇಸ್ರೇಲಿನ ಪ್ರತಿಪಕ್ಷ ನಾಯಕ ಬೆನ್ನಿ ಗಾಂಟ್ಸ್ ಹೇಳಿದ್ದಾರೆ.
ಸೋಮವಾರ ವೈಟ್ ಹೌಸ್ನಲ್ಲಿ ನೆತನ್ಯಾಹುರೊಂದಿಗೂ ಮತ್ತು ಬೆನ್ನಿ ಗಾಂಟ್ಸ್ರೊಂದಿಗೂ ಟ್ರಂಪ್ ಪ್ರತ್ಯ ಪ್ರತ್ಯೇಕವಾಗಿ ಚರ್ಚಿಸಿದ್ದರು. ನೆತನ್ಯಾಹು ಮತ್ತು ಟ್ರಂಪ್ ಇಬ್ಬರೂ ರಾಜಕೀಯ ಸವಾಲೆದುರಿಸುತ್ತಿರುವ ಸಮಯದಲ್ಲಿ ಹೊಸ ಯೋಜನೆಯೊಂದಿಗೆ ಇಬ್ಬರೂ ರಂಗಪ್ರವೇಶಿಸಿದ್ದಾರೆ. ಟ್ರಂಪ್ ವಾಗ್ದಂಡನೆ ಕ್ರಮಗಳು ಸೆನೆಟ್ನಲ್ಲಿ ನಡೆಯುತ್ತಿವೆ. ನೆತನ್ಯಾಹು ವಿರುದ್ಧದ ಭ್ರಷ್ಟಾಚಾರ ವಿಚಾರಣೆ ಆರಂಭಗೊಳ್ಳಲಿದೆ. ಟ್ರಂಪ್ ಯೋಜನೆ ತಿರಸ್ಕರಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಫೆಲಸ್ತೀನ್ ಪ್ರಧಾನಿ ಮುಹಮ್ಮದ್ ಇಶ್ತಯ್ಯ ಆಗ್ರಹಿಸಿದ್ದಾರೆ.












