ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 1: ದೇಶ ಎದುರಿಸುತ್ತಿರುವ ದೊಡ್ಡ ಸವಾಲು ನಿರುದ್ಯೋಗವಾಗಿದ್ದು ಅದರ ಪರಿಹಾರಕ್ಕೆ ಬಜೆಟ್ನಲ್ಲಿ ಯಾವುದೇ ಘೋಷಣೆಯಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತದ ಇತಿಹಾಸದಲ್ಲಿ ಅತ್ಯಂತ ಉದ್ದದ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ಕೇವಲ ಪೊಳ್ಳುತನವನ್ನು ಘೋಷಿಸಿದರೆಂದು ರಾಹುಲ್ ಟೀಕಿಸಿದರು.
ದೇಶ ಎದುರಿಸುತ್ತಿರುವ ಪ್ರಧಾನ ಸಮಸ್ಯೆ ನಿರುದ್ಯೋಗ. ನಮ್ಮ ಯುವಕರಿಗೆ ಉದ್ಯೋಗ ಲಭಿಸಲು ಸಹಾಯಕವಾದ ಯಾವುದೇ ವಿಚಾರವು ಬಜೆಟ್ನಲ್ಲಿ ಕಂಡು ಬಂದಿಲ್ಲ. ತಂತ್ರಗಾರಿಕೆಯ ಕೆಲವು ವಿಷಯಗಳು ಬಜೆಟ್ನಲ್ಲಿವೆ. ಆದರೆ ಅವೆಲ್ಲ ಕೇವಲ ಮಾತುಗಳಾಗಿ ಉಳಿಯುವಂಥದ್ದು ಎಂದು ರಾಹುಲ್ ಮಾಧ್ಯಮಗಳಿಗೆ ತಿಳಿಸಿದರು.
ಬಜೆಟ್ ಘೋಷಣೆಯಲ್ಲಿ ಪುನರಾವರ್ತನೆಗಳು ಮತ್ತು ಪರಸ್ಪರ ಸಂಬಂಧವಿಲ್ಲದ್ದೆಲ್ಲ ಕಂಡು ಬಂದಿವೆ. ಇವೆಲ್ಲ ಸರಕಾರದ ಮಾನಸಿಕ ಸ್ಥಿತಿಯನ್ನು ಬೆಟ್ಟು ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಟೀಕಿಸಿದರು.












