ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 4: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶವ್ಯಾಪಕವಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಲೋಕಸಭೆಯಲ್ಲಿ ಗೃಹ ಸಚಿವಾಲಯ ಇದನ್ನು ತಿಳಿಸಿತು. ಎನ್ಆರ್ ಸಿ ವಿಷಯ ವಿವಾದವಾದ ಬಳಿಕ ಕೇಂದ್ರ ಸರಕಾರದಿಂದ ಅಧಿಕೃತವಾಗಿ ಬಂಡ ಮೊದಲ ಹೇಳಿಕೆ ಇದಾಗಿದೆ.
ರಾಷ್ಟ್ರೀಯ ಪೌರತ್ವ ಪಟ್ಟಿ ದೇಶಾದ್ಯಂತ ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿಲ್ಲಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಬರಹ ಮೂಲಕ ವಿವರಣೆ ನೀಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಎನ್ ಆರ್ ಸಿ ಜಾರಿಗೊಳಿಸಲು ಕೇಂದ್ರ ಸರಕಾರದ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಕೇಂದ್ರ ಗೃಹ ಸಹಾಯಕ ಸಚಿವ ನಿತ್ಯಾನಂದ ರಾಯ್ ಉತ್ತರ ನೀಡುತ್ತಿದ್ದರು. ಅಸ್ಸಾಮಿನಲ್ಲಿ ಜಾರಿಗೊಳಿಸಲಾದ ಪೌರತ್ವ ಪಟ್ಟಿಯ ಮಾದರಿಯಲ್ಲಿ ದೇಶಾದ್ಯಂತ ಎನ್ಆರ್ ಸಿ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ ಮತ್ತು ನವೀಕೃತ ಜನಸಂಖ್ಯಾ ಪಟ್ಟಿಯನ್ನು (ಎನ್ ಪಿ ಆರ್) ಅನ್ನು ಬಳಸಿ ಎನ್ಆರ್ ಸಿ ಜಾರಿಗೊಳಿಸಲು ಸರಕಾರ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿತ್ತು. ಗೃಹ ಸಚಿವರು ಇಂಥದ್ದೊಂದು ಸೂಚನೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ನೀಡಿದ್ದರು. ಹಾಗೆಯೇ,
ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಪಾರ್ಲಿಮೆಂಟಿನಲ್ಲಿ ಪಾಸಾಗಿತ್ತು. ಈ ಪ್ರಕಾರ 2014 ಡಿಸೆಂಬರ್ 31ರೊಳಗೆ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಬಂದ ಹಿಂದೂ ಸಿಖ್, ಬುದ್ಧ, ಜೈನ, ಪಾರ್ಸಿ, ಕ್ರೈಸ್ತ ಧರ್ಮದ ಅನಧಿಕೃತ ವಲಸಿಗರಿಗೆ ಭಾರತದ ಪೌರತ್ವವು ಲಭಿಸಲಿದೆ. ಆದರೆ, ವಲಸಿಗ ಮುಸ್ಲಿಮರಿಗೆ ಈ ಅವಕಾಶ ಇಲ್ಲ.












