1983ರ ಗಲಭೆಯಲ್ಲಿ ನಿರಾಶ್ರಿತರಾಗಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿದ ಅಸ್ಸಾಂ

0
14

ಸನ್ಮಾರ್ಗ ವಾರ್ತೆ

1983ರಲ್ಲಿ ರಾಜ್ಯವ್ಯಾಪಿ ನಡೆದ ಗಲಭೆಯ ವೇಳೆ ನಿರಾಶ್ರಿತರಾಗಿ ಬೋಗಿನದಿಯ ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಅಸ್ಸಾಂನ ಲಖಿಂಪುರದ ಅಧಿಕಾರಿಗಳು ಶುಕ್ರವಾರ ನೆಲಸಮಗೊಳಿಸಿದ್ದಾರೆ.

ತಮ್ಮ ನೆರೆಯ ಹಿಂದೂ ಕುಟುಂಬಗಳನ್ನು ಒಕ್ಕಲೆಬ್ಬಿಸದ ಕಾರಣ, ಅಧಿಕಾರಿಗಳು “ಮುಸ್ಲಿಂ ಮನೆಗಳನ್ನು” ಗುರಿಯಾಗಿಸಿಕೊಂಡಿದ್ದಾರೆ ಎಂದು ಈ ಕುಟುಂಬಗಳು ಆರೋಪಿಸಿವೆ.

ದಾಖಲೆರಹಿತ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಲು 1979ರಲ್ಲಿ ಆರಂಭಿಸಲಾದ ‘ಅಸ್ಸಾಂ ಚಳವಳಿ’ಯ ಉತ್ತುಂಗದಲ್ಲಿದ್ದಾಗ ರಾಜ್ಯದಲ್ಲಿ ಗಲಭೆಗಳು ಭುಗಿಲೆದ್ದಿದ್ದವು. 1985ರವರೆಗೆ ನಡೆದ ಈ ಚಳವಳಿಯ ನೇತೃತ್ವವನ್ನು ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ವಹಿಸಿತ್ತು ಮತ್ತು ಇದು ಹೆಚ್ಚಾಗಿ “ಬಾಂಗ್ಲಾದೇಶಿಗಳು” ಎಂದು ಆರೋಪಿಸಲ್ಪಟ್ಟ ಬಂಗಾಳಿ ಮಾತನಾಡುವ ಹಿಂದೂಗಳು ಹಾಗೂ ಮುಸ್ಲಿಮರ ವಿರುದ್ಧ ಕೇಂದ್ರೀಕೃತವಾಗಿತ್ತು.

‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ಮತ್ತು ‘ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್’ ನಾಯಕತ್ವದ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯನ್ನು ಘೋಷಿಸಿದಾಗ, 1983ರ ಫೆಬ್ರವರಿ ಸುಮಾರಿಗೆ ಉದ್ವಿಗ್ನತೆ ತಾರಕಕ್ಕೇರಿತ್ತು. ಇದರ ಪರಿಣಾಮವಾಗಿ ಬ್ರಹ್ಮಪುತ್ರ ಕಣಿವೆಯಾದ್ಯಂತ ಸಾವಿರಾರು ಜನರು ನಿರಾಶ್ರಿತರಾಗಿದ್ದರು.

ಶುಕ್ರವಾರ ನೆಲಸಮಗೊಳಿಸಲಾದ ಮನೆಗಳು ಲಖಿಂಪುರದ ಕದಂ ಕಂದಾಯ ವೃತ್ತದ ಅಡಿಯಲ್ಲಿರುವ 622.4 ಎಕರೆ ವೃತ್ತಿಪರ ಹುಲ್ಲುಗಾವಲು ಜಮೀನಿನ ಪೈಕಿ ಸುಮಾರು 9.9 ಎಕರೆ ಪ್ರದೇಶದಲ್ಲಿದ್ದವು ಎಂದು ‘ರೈಜೋರ್ ದಳ’ದ ನಾಯಕ ಅಝೀಝುರ್ ರೆಹಮಾನ್ ತಿಳಿಸಿರುವುದಾಗಿ ಸ್ಕ್ರಾಲ್‌.ಕಾಂ ವರದಿಯಾಗಿದೆ.

“1983ರಲ್ಲಿ ನಿರಾಶ್ರಿತರಾದ ನಂತರ ಅಸ್ಸಾಂ ಸರ್ಕಾರವೇ ಈ ಜಮೀನಿನಲ್ಲಿ ಬಂಗಾಳಿ ಮುಸ್ಲಿಂ ನಿವಾಸಿಗಳಿಗೆ ನೆಲೆ ಕಲ್ಪಿಸಿತ್ತು. ಸರ್ಕಾರವು ಈ ಪ್ರದೇಶದಲ್ಲಿ ರಸ್ತೆಗಳು ಮತ್ತು ಶಾಲೆಗಳನ್ನು ನಿರ್ಮಿಸಿತ್ತು ಹಾಗೂ ಅವರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನೂ ನೀಡಿತ್ತು. ಹೀಗಾಗಿ, ಈ ಜಮೀನಿನ ಮೇಲಿನ ತಮ್ಮ ಹಕ್ಕಿನ ಬಗ್ಗೆ ನಿವಾಸಿಗಳು ವಿಶ್ವಾಸ ಹೊಂದಿದ್ದರು” ಎಂದು ರೆಹಮಾನ್ ಹೇಳಿದ್ದಾರೆ.

595 ಎಕರೆ ವೃತ್ತಿಪರ ಹುಲ್ಲುಗಾವಲು ಜಮೀನಿನಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯದ ಸದಸ್ಯರ ಮನೆಗಳನ್ನು ನೆಲಸಮಗೊಳಿಸದ ಕಾರಣ, ಈ ಕಾರ್ಯಾಚರಣೆಯು “ಆಯ್ದ (ಪಕ್ಷಪಾತದ)” ಕ್ರಮವಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಇದು ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ರೆಹಮಾನ್ ಹೇಳಿದ್ದಾರೆ. ಸಂವಿಧಾನದ 14ನೇ ವಿಧಿಯು ಸಮಾನತೆಯ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ.

ಶುಕ್ರವಾರ ತಮ್ಮ ಕುಟುಂಬಕ್ಕೆ ಸೇರಿದ ಎರಡು ಮನೆಗಳನ್ನು ನೆಲಸಮಗೊಳಿಸಲಾಗಿದೆ, ಆದರೆ ತಮ್ಮ ಮನೆಗಳ ಪಕ್ಕದಲ್ಲೇ ಇರುವ ಹಿಂದೂ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು 50 ವರ್ಷದ ಮೊಹಮ್ಮದ್ ತುಷನ್ ಅಲಿ ಕೂಡ ಹೇಳಿದ್ದಾರೆ. ಬಾರ್ಪೇಟಾದಿಂದ ನಿರಾಶ್ರಿತರಾದ ಬಳಿಕ ಅಲಿ ಮತ್ತು ಅವರ ಕುಟುಂಬ 1985ರಿಂದ ಈ ಜಮೀನಿನಲ್ಲಿ ವಾಸಿಸುತ್ತಿತ್ತು.

“ಮುಸ್ಲಿಂ ಮನೆಗಳನ್ನು ಗುರಿಯಾಗಿಸಲಾಗಿದೆ… ನಾವೀಗ ನದಿ ದಂಡೆಯಲ್ಲಿದ್ದೇವೆ. ಪೊಲೀಸರು ನಮ್ಮನ್ನು ಈ ಪ್ರದೇಶದಿಂದ ಓಡಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಅಸ್ಸಾಂ ಸರ್ಕಾರವು 1,900ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಅವರ ಮನೆಗಳಿಂದ ಒಕ್ಕಲೆಬ್ಬಿಸಿದೆ.

ನವೆಂಬರ್ 1ರಂದು ಧುಬ್ರಿ ಜಿಲ್ಲೆಯ ಅಧಿಕಾರಿಗಳು 640ಕ್ಕೂ ಹೆಚ್ಚು ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿದ್ದರು. ಆಲಂಗಂಜ್ ಪಾರ್ಟ್-IX ಗ್ರಾಮದ 650 ಬಿಘಾ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ಈ ಕಾರ್ಯಾಚರಣೆ ನಡೆದಿತ್ತು.

ಅಕ್ಟೋಬರ್ 18ರಂದು ಎರಡು ದಿನಗಳ ಕಾರ್ಯಾಚರಣೆಯಲ್ಲಿ ನಾಗಾಂವ್, ಹೊಜೈ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು.

ಸ್ಕ್ರಾಲ್.ಕಾಂ ವರದಿ ಮಾಡಿರುವಂತೆ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಜಿಲ್ಲಾ ಅಧಿಕಾರಿಗಳ ಅಂಕಿಅಂಶಗಳ ಪ್ರಕಾರ, ಅಸ್ಸಾಂನಲ್ಲಿ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಸುಮಾರು 19,000 ಕುಟುಂಬಗಳನ್ನು ಸರ್ಕಾರಿ ಜಮೀನಿನಿಂದ ಒಕ್ಕಲೆಬ್ಬಿಸಲಾಗಿದ್ದು, ಅವರಲ್ಲಿ ಬಹುಪಾಲು ಮುಸ್ಲಿಮರಾಗಿದ್ದಾರೆ.