ಹೈದರಾಬಾದ್ಗೆ ಪ್ರಯಾಣ ಬೆಳೆಸುವ ಕೆಲವೇ ಕ್ಷಣಗಳ ಮೊದಲು ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ ಅವರ ವೀಸಾವನ್ನು ರದ್ದುಗೊಳಿಸಿರುವ ನಿರ್ಧಾರಕ್ಕೂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರು ಟೀಕಿಸಿರುವುದಕ್ಕೂ ಸಂಬಂಧವಿದೆಯೇ ಎಂದು ನಾರ್ವೆಯ ಎರಡು ಪತ್ರಿಕಾ ಸಂಘಟನೆಗಳು ಶುಕ್ರವಾರ ಓಸ್ಲೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಪ್ರಶ್ನಿಸಿವೆ.
ತಮ್ಮ ವೀಸಾ ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ ಎಂದು ಸ್ವೆಂಡ್ಸೆನ್ ಗುರುವಾರ ತಿಳಿಸಿದ್ದರು. ‘ಸ್ಕ್ರಾಲ್.ಕಾಂ’ಗೆ ನೀಡಿದ ಸಂದರ್ಶನದಲ್ಲಿ, ಈ ನಿರ್ಧಾರವು “ಮೇಲಿನವರ ಆದೇಶದ ಮೇರೆಗೆ” ಬಂದಿದೆ ಎಂದು ತಮಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದರು.
ನಾರ್ವೆಯ ಈ ಪತ್ರಕರ್ತೆ ತೆಲಂಗಾಣದಲ್ಲಿ ನಡೆಯಲಿದ್ದ ‘ಭಾರತ್ ಶೃಂಗಸಭೆ’ಯಲ್ಲಿ ಪ್ರತಿನಿಧಿಯಾಗಿ ಭಾಗವಹಿಸಬೇಕಿತ್ತು. ಈ ಕಾರ್ಯಕ್ರಮವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಯೋಜಿಸಿತ್ತು.
ಮೇ ತಿಂಗಳಲ್ಲಿ ಮೋದಿ ಅವರು ನಾರ್ವೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲು ಅವರು ಹಿಂದೇಟು ಹಾಕುತ್ತಿರುವ ಬಗ್ಗೆ ಸ್ವೆಂಡ್ಸೆನ್ ಪ್ರಶ್ನಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಅವರು ನಾರ್ವೆಯ ‘ಡಾಗ್ಸಾವಿಸೆನ್’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶುಕ್ರವಾರ ಬರೆದಿರುವ ಪತ್ರದಲ್ಲಿ ‘ನಾರ್ವೆ ಸಂಪಾದಕರ ಸಂಘ’ ಮತ್ತು ‘ನಾರ್ವೆ ಪತ್ರಿಕಾ ಸಂಘ’ವು, “ಭಾರತದ ಪ್ರಧಾನ ಮಂತ್ರಿಗೆ ಅವರು ಕೇಳಿದ ವಿಮರ್ಶಾತ್ಮಕ ಪ್ರಶ್ನೆಗಳಿಗೂ ಮತ್ತು ಅವರ ಪತ್ರಕರ್ತ ವೀಸಾ ರದ್ದತಿಗೂ ಸಂಬಂಧವಿದೆಯೇ ಎಂದು ಕೇಳುವುದು ನ್ಯಾಯಸಮ್ಮತವಾಗಿದೆ” ಎಂದು ಹೇಳಿವೆ.
“ಆಡಳಿತ ನಡೆಸುವವರನ್ನು ಪ್ರಶ್ನಿಸುವ ಸ್ವಾತಂತ್ರ್ಯ ಪತ್ರಕರ್ತರಿಗೆ ಇರಬೇಕು. ಇದು ಸಮಾಜದಲ್ಲಿ ಅವರ ಪಾತ್ರದ ಒಂದು ಭಾಗ ಮತ್ತು ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ವಿಮರ್ಶಾತ್ಮಕ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಪತ್ರಕರ್ತರಿಗೆ ಪ್ರವೇಶ ನಿರಾಕರಿಸುವುದು ಪತ್ರಿಕಾ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಯಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಭವಿಷ್ಯದಲ್ಲಿ ಭಾರತದ ಕುರಿತು ವರದಿ ಮಾಡುವ ಹಾಗೂ ದೇಶವನ್ನು ಹೇಗೆ ಆಳಲಾಗುತ್ತಿದೆ ಎಂದು ಪ್ರಶ್ನಿಸುವ ನಾರ್ವೆ ಮತ್ತು ಇತರ ವಿದೇಶಿ ಪತ್ರಕರ್ತರ ಸಾಮರ್ಥ್ಯದ ಮೇಲೆ ಈ ಪ್ರಕರಣವು ಬೀರುವ ಪರಿಣಾಮದ ಬಗ್ಗೆ ನಮಗೆ ಕಳವಳವಿದೆ” ಎಂದು ಸಂಘಟನೆಗಳು ತಿಳಿಸಿವೆ.
‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಸಂಸ್ಥೆಯ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 157ನೇ ಸ್ಥಾನದಲ್ಲಿದೆ ಎಂಬುದನ್ನೂ ಅವು ಗಮನಕ್ಕೆ ತಂದಿವೆ.
“ಇತರ ವಿಷಯಗಳ ಜೊತೆಗೆ, 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ ಎಂದು [ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್] ಉಲ್ಲೇಖಿಸಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ಭಾರತೀಯ ಅಧಿಕಾರಿಗಳು ಈ ಹಿಂದೆಯೂ ವಿದೇಶಿ ಪತ್ರಕರ್ತರ ವೀಸಾ ಮತ್ತು ಪರವಾನಗಿಗಳನ್ನು ರದ್ದುಗೊಳಿಸಿದ್ದಾರೆ ಅಥವಾ ನವೀಕರಿಸಲು ನಿರಾಕರಿಸಿದ್ದಾರೆ ಎಂದು ಪತ್ರದಲ್ಲಿ ಸೇರಿಸಲಾಗಿದೆ.
“ಸೂಕ್ಷ್ಮ ವಿಷಯಗಳ ಕುರಿತು ವರದಿ ಮಾಡದಂತೆ ವಿದೇಶಿ ಪತ್ರಕರ್ತರನ್ನು ತಡೆಯಲು ವೀಸಾ ನಿಯಮಗಳನ್ನು ಬಳಸುವುದನ್ನು ನಿಲ್ಲಿಸುವಂತೆ 2024ರಲ್ಲಿ ‘ಪತ್ರಕರ್ತರ ರಕ್ಷಣಾ ಸಮಿತಿ’ (ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್) ಭಾರತೀಯ ಅಧಿಕಾರಿಗಳಿಗೆ ಕರೆ ನೀಡಿತ್ತು ಹಾಗೂ ಮಾಧ್ಯಮಗಳನ್ನು ಸೆನ್ಸಾರ್ ಮಾಡಲು ಅಥವಾ ಬೆದರಿಸಲು ವೀಸಾ ನಿಯಮಗಳನ್ನು ಬಳಸಬಾರದು ಎಂದು ಒತ್ತಿಹೇಳಿತ್ತು” ಎಂದು ಪತ್ರದಲ್ಲಿ ತಿಳಿಸಲಾಗಿದೆ.












