ಸನ್ಮಾರ್ಗ ವಾರ್ತೆ
ಶಮೀರ ಜಹಾನ್ ಮಂಗಳೂರು
ಸಿ.ಎ.ಎ ,ಎನ್ ಅರ್ ಸಿ ,ಎನ್.ಪಿ.ಆರ್ ಪರ ಮತ್ತು ವಿರೋಧವಾಗಿ ದೇಶದಾದ್ಯಂತ ಜನ ಜಾಗೃತಿ ಸಭೆಗಳು ನಡೆಯುತ್ತಿವೆ. ಪರ ವಾದಿಸುವವರು ಮುಸ್ಲಿಮರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಅಂದರೆ ಭಾರತೀಯ ಮುಸ್ಲಿಮರು ಭಯದಿಂದ ಬೀದಿಗಿಳಿದ್ದಾರೆ. ಮುಸ್ಲಿಮರ ಬಳಿ ಸೂಕ್ತ ದಾಖಲೆಗಳಿಲ್ಲ. ಎಲ್ಲರೂ ಡಿಟೆಂಶನ್ ಸೆಂಟರ್ ಗೆ ಹೋಗಬೇಕಾಗಿದೆ ಎಂದು ಇವರು ಭಾವಿಸಿರುವುದಾದರೆ ಅದು ತಪ್ಪು ಗ್ರಹಿಕೆಯಾಗಿದೆ. ಪ್ರತಿಭಟಿಸುವ ಮುಸಲ್ಮಾನರಲ್ಲಿ ಖಂಡಿತ ದಾಖಲೆಗಳಿವೆ. ಮಾತ್ರವಲ್ಲ ಹೊರದೇಶಗಳಿಂದ ಬಂದವರಿಗೆ ಪೌರತ್ವ ನೀಡುವ ಸರಕಾರದ ನಿಲುವನ್ನು ಕೂಡ ಮುಸ್ಲಿಮರು ಗೌರವಿಸುತ್ತಾರೆ. ಆದರೆ (ಎನ್.ಆರ್.ಸಿ )ಪೌರತ್ವದ ಹೆಸರಿನಲ್ಲಿ ಸರಕಾರ ಇಡೀ ಭಾರತೀಯರನ್ನು ಪೌರತ್ವ ಪರೀಕ್ಷೆಗೆ ಒಳಪಡಿಸಿ ಬಡವರ ನಿರ್ಗತಿಕರ ಸಮಯವನ್ನೂ, ರಕ್ತವನ್ನೂ ಹೀರುವ ಮಾರ್ಗವನ್ನು ಖಂಡಿತ ಸಹಿಸಲಾರರು. ಸಮಾಜದ ದುರ್ಬಲ ವರ್ಗಗಳಿಗಾಗಿ ಬೀದಿಗಿಳಿದು ಮುಸಲ್ಮಾನರು ಹೋರಾಟ ಮಾಡುತ್ತಿದ್ದಾರೆಯೇ ವಿನಃ ಯಾವ ಸ್ವಾರ್ಥ ಲಾಭವೂ ಇದರಲ್ಲಿ ಅಡಕವಾಗಿಲ್ಲ. ಇನ್ನೊಂದು ನಾಚಿಕೆಗೇಡಿನ ಸಂಗತಿ ಏನೆಂದರೆ, ಭಾರತೀಯರಾಗಿದ್ದರೂ ಎನ್.ಆರ್.ಸಿ ಯಿಂದಾಗಿ ಸಮರ್ಪಕ ದಾಖಲೆ ನೀಡಲು ಸಾಧ್ಯವಾಗದ ಮುಸ್ಲಿಮೇತರ ಬಾಂಧವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತೀಯ ಪೌರತ್ವ ಸಿಗುವುದಾದರೂ ಹೊರದೇಶಗಳಿಂದ ಬಂದವರು ಎಂಬುದಾಗಿ ಪರೋಕ್ಷವಾಗಿ ಒಪ್ಪಿ ಕೊಂಡಂತೆ ಆಗುವುದಿಲ್ಲವೇ? ಇದಕ್ಕಿಂತ ದೊಡ್ಡ ದೌರ್ಜನ್ಯ ಬೇರೇನಿದೆ?
ದೇಶದ ಆತ್ಮವನ್ನೇ ಘಾಸಿಗೊಳಿಸುವ ಕರಾಳ ಕಾಯಿದೆ, ಕಾನೂನುಗಳು ಜಾರಿಯಾಗದಂತೆ ಸರಕಾರ ಎಚ್ಚರವಹಿಸಲಿ. ದೇಶ ಮತ್ತು ದೇಶವಾಸಿಗಳ ಹಿತಬಯಸಲಿ. ಪರೋಕ್ಷವಾಗಿ ಯಾರನ್ನೂ ಅವಮಾನಿಸದಿರಲಿ. ಎನ್.ಆರ್.ಸಿಯಿಂದಾಗಿ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗುವುದನ್ನು, ಕಛೇರಿಗಳಿಗೆ ಅಲೆದಾಡುವುದನ್ನು, ಬಡವರ ಹಣ ಖರ್ಚಾಗುವುದನ್ನು ತಪ್ಪಿಸಲಿ.












