ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 4: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯ ವೇಳೆ ಜಾಮೀಅ ಮಿಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಘಟನೆಯ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.
ದೇಶದ ರಾಜಧಾನಿಯಲ್ಲಿ ನಾಲ್ಕು ದಿವಸಗಳಲ್ಲಿ ಪ್ರತಿಭಟನಾಕಾರರ ಮೇಲೆ ಮೂರು ಬಾರಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಆಡಳಿತ ಪಕ್ಷದವರು, ಆದ್ದರಿಂದ ಸರಕಾರ ಮೌನ ಪಾಲಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ. ಇದೇವೇಳೇ ರವಿವಾರ ರಾತ್ರೆ ಸ್ಕೂಟರಿನಲ್ಲಿ ಬಂದು ಗುಂಡು ಹಾರಿಸಲಾದ ಘಟನೆಯಲ್ಲಿ ವಾಹನದ ನಂಬರ್ ಸ್ಪಷ್ಟವಾಗಿದ್ದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಕೆಂಬಣ್ಣದ ಸ್ಕೂಟರಿನಲ್ಲಿ ದುಷ್ಕರ್ಮಿಗಳು ಬಂದಿದ್ದರು. ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಮತ್ತು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ಶೀಘ್ರ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಂಡಿದೆ.
ಜನವರಿ 30ಕ್ಕೆ ಜಾಮಿಅ ವಿದ್ಯಾರ್ಥಿಗಳ ಮೇಲೆ ಮೊದಲ ಸಲ ಗುಂಡು ಹಾರಾಟ ನಡೆದಿತ್ತು. ನಂತರ ಶನಿವಾರ ಮಹಿಳೆಯರು ಹೋರಾಟ ನಡೆಸುತ್ತಿರುವ ಶಾಹೀನ್ ಬಾಗ್ನಲ್ಲಿ ಗುಂಡು ಹಾರಾಟ ನಡೆದಿದೆ. ಈ ಘಟನೆಯಲ್ಲಿ ಪ್ರತಿಭಟನಾಕಾರರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ನಂತರ ರವಿವಾರ ಜಾಮಿಅದಲ್ಲಿ ಪುನಃ ಗುಂಡು ಹಾರಾಟ ನಡೆದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಜಗದೀಶ್ ಯಾದವ್ ಹೇಳಿದ್ದಾರೆ. ತಮಗೆ ಸುರಕ್ಷೆ ಒದಗಿಸಬೇಕೆಂದು ಶಾಹೀನ್ ಬಾಗ್ ಮಹಿಳೆಯರು ಕೇಂದ್ರ ಗೃಹ ಸಚಿವಾಲಯ ಮತ್ತು ಚುನಾವಣಾ ಆಯೋಗ, ಮಾನವಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದಾರೆ.












