ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 4: ರಾಷ್ಟ್ರಪಿತ ಮಹಾತ್ಮಗಾಂಧಿ ಕುರಿತು ತಾನು ವಿವಾದಿತ ಹೇಳಿಕೆ ನೀಡಿಲ್ಲ, ಆದ್ದರಿಂದ ಈ ವಿಷಯದಲ್ಲಿ ಕ್ಷಮೆ ಯಾಚಿಸುವುದಿಲ್ಲ ಎಂದು ಬಿಜೆಪಿ ಸಂಸದ ಮಾಜಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿದ್ದಾರೆ. ಗಾಂಧಿಯ ವಿರುದ್ಧ ನಾನು ಒಂದು ಮಾತನ್ನೂ ಆಡಿಲ್ಲ. ಸ್ವಾತಂತ್ರ್ಯ ಹೋರಾಟದ ಕುರಿತು ಹೇಳಿದ್ದೇನೆ. ಆದ್ದರಿಂದ ಕ್ಷಮೆ ಯಾಚಿಸುವುದಿಲ್ಲ ಎಂದು ಅವರು ಹೇಳಿದರು. ಭಾರತದಲ್ಲಿ ನಡೆದ ಎಲ್ಲ ಸ್ವಾತಂತ್ರ್ಯ ಹೋರಾಟಗಳು ಬ್ರಿಟಿಷರ ಬೆಂಬಲ, ಸಹಮತದಿಂದ ನಡೆಯಿತು. ಸ್ವಾತಂತ್ರ್ಯ ಸಮರ ದೊಡ್ಡ ನಾಟಕವಾಗಿತ್ತು ಎಂದು ಅನಂತ್ ಕುಮಾರ ಹೆಗಡೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಬಿಜೆಪಿ ನೇತೃತ್ವವು ಕ್ಷಮೆ ಯಾಚಿಸಬೇಕೆಂದು ಅನಂತ ಕುಮಾರ್ ಹೆಗಡೆಗೆ ಸೂಚಿಸಿದೆ. ರಾಷ್ಟ್ರಪಿತನನ್ನು ಅಪಮಾನಿಸಿದ ಹೆಗಡೆಯ ವಿರುದ್ಧ ಕ್ರಮ ಜರಗಿಸದ ಬಿಜೆಪಿ ಗೋಡ್ಸೆಯ ಪಾರ್ಟಿಯೆಂದು ಪುನಃ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಗಾಂಧಿಯ ಅನ್ನ ಸತ್ಯಾಗ್ರಹದಿಂದ ಬ್ರಿಟಿಷರು ಭಾರತ ಬಿಟ್ಟು ಹೋದರೆಂಬ ಕಾಂಗ್ರೆಸ್ಸಿಗರ ವಾದ ತಪ್ಪೆಂದು ಕೂಡ ಹೆಗಡೆ ಹೇಳಿದ್ದರು.












