ಹೆಗಡೆ ಹೇಳಿಕೆ: ಪಾರ್ಲಿಮೆಂಟಿನಲ್ಲಿ ಸಭಾತ್ಯಾಗ; ಹೆಗಡೆ ರಾವಣನ ವಂಶಸ್ಥ ಎಂದ ಅಧೀರ್ ರಂಜನ್

0
1125

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 4: ಮಹಾತ್ಮಾ ಗಾಂಧಿಯ ಸ್ವಾತಂತ್ರ್ಯ ಹೋರಾಟ ನಾಟವಾಗಿದೆ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆಯನ್ನು ವಿರೋಧಿಸಿ ಪ್ರತಿಪಕ್ಷ ಪಾರ್ಲಿಮೆಂಟಿನಲ್ಲಿ ಸಭಾತ್ಯಾಗ ಮಾಡಿತು. ಅನಂತ್‍ಕುಮಾರ್ ಹೇಳಿಕೆಯನ್ನು ಇಲ್ಲಿ ಚರ್ಚಿಸಬೇಕೆಂದು ಕಾಂಗ್ರೆಸ್ ಸಂಸದ ಹೈಬಿ ಈಡನ್, ಗೌರವ್ ಗೊಗೊಯಿ, ಸುರೇಶ್, ಅಬ್ದುಲ್ ಹಲಿಕ್ ತುರ್ತು ಪ್ರಸ್ತಾವಕ್ಕೆ ನೋಟಿಸು ನೀಡಿದ್ದರು. ಇದನ್ನು ಮಂಡಿಸಲು ನಿರಾಕರಿಸಿದ್ದರಿಂದ ಲೋಕಸಭೆಯ ಅಧಿವೇಶನ ಗದ್ದಲದಲ್ಲಿ ಕೊನೆಗೊಂಡಿದೆ. ನಂತರ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ಸದನ ಕಲಾಪಗಳನ್ನು ಸ್ಥಗಿತಗೊಳಿಸಲಾಯಿತು. ನಂತರ ಸಭೆ ಸೇರಿದಾಗ ಈ ವಿಷಯದಲ್ಲಿ ಕೇಂದ್ರ ಸರಕಾರ ತೃಪ್ತಿಕರ ಉತ್ತರ ನೀಡಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಸಭಾತ್ಯಾಗ ಮಾಡಿತು.

ಅನಂತ್‍ಕುಮಾರ್ ಹೆಗಡೆ ರಾವಣನ ಕುಟುಂಬ ಸದಸ್ಯ ಎಂದು ಕಾಂಗ್ರೆಸ್‍ನ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದರು. ಇಂದು ಆತ ಮಹಾತ್ಮಾಗಾಂಧಿಯನ್ನು ನಿಂದಿಸಿದರು. ಆತ ರಾವಣನ ಕುಟುಂಬ ಸದಸ್ಯ. ರಾಮನನ್ನು ಪೂಜಿಸುತ್ತಿದ್ದ ವ್ಯಕ್ತಿಯನ್ನು ಅಪಮಾನಿಸಿದ್ದಾರೆ ಎಂದು ಸಭಾತ್ಯಾಗದ ಮೊದಲು ರಂಜನ್ ಚೌಧರಿ ಹೇಳಿದರು. ಭಾರತದಲ್ಲಿ ನಡೆದ ಎಲ್ಲ ಸ್ವಾತಂತ್ರ್ಯ ಹೋರಾಟಗಳು ಬ್ರಿಟಿಷ್ ಸರಕಾರದ ಬೆಂಬಲ ಸಮ್ಮತಿಯಿಂದ ನಡೆದಿತ್ತು. ಸ್ವಾತಂತ್ರ್ಯ ಸಮರವೇ ಒಂದು ನಾಟಕವಾಗಿತ್ತು ಎಂದು ಅನಂತಕುಮಾರ್ ಹೆಗಡೆ ಬೆಂಗಳೂರಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆರೋಪಿಸಿದ್ದರು. ಗಾಂಧಿಯ ಅನ್ನಸತ್ಯಾಗ್ರಹ ನಾಟಕವೆಂದೂ ಅನ್ನಸತ್ಯಾಗ್ರಹ ದಿಂದ ಬ್ರಿಟಿಷರು ಭಾರತ ತೊರೆದರೆಂಬ ಕಾ೦ಗ್ರೆಸಿಗರ ಅಭಿಮತ ತಪ್ಪು ಎಂದೂ ಹೆಗಡೆ ಹೇಳಿದ್ದರು. ಇದಕ್ಕೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಾಯಕರು ಅನಂತ ಕುಮಾರ್ ಹೆಗಡೆಗೆ ಸೂಚಿಸಿದೆ.