ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 6: ಸುನ್ನೀ ಸೆಂಟ್ರಲ್ ವಕ್ಫ್ ಬೋರ್ಡಿಗೆ ಅಯೋಧ್ಯೆಯಿಂದ 25 ಕಿಲೊಮೀಟರ್ ದೂರದಲ್ಲಿ ಐದು ಎಕರೆ ಜಮೀನು ನೀಡಲಾಗುತ್ತಿದೆ. ಅಯೋಧ್ಯೆಯ ಜಿಲ್ಲೆಯ ಧಾನಿಪರ ಗ್ರಾಮದ ಸೊಹಾವಾಲ್ ತಹಶೀಲಿನಲ್ಲಿ ಉತ್ತರಪ್ರದೇಶ ಸರಕಾರ ಈ ಜಮೀನನ್ನು ನೀಡಿದೆ.
ಜಿಲ್ಲಾ ಕೇಂದ್ರವಾದ ಫೈಝಾಬಾದ್ನಿಂದ ಹದಿನೆಂಟು ಕಿಲೊಮೀಟರ್ ದೂರದಲ್ಲಿ ಈ ಜಮೀನು ಇದೆ. ಪಂಚಕೋಶಿ ಪರಿಕರ್ಮ ಎಂದು ಅರಿಯಲ್ಪಡುವ ಅಯೋಧ್ಯೆಯ ಸುತ್ತಮುತ್ತಲಿನ ಹದಿನೈದು ಕಿಲೊಮೀಟರ್ ಹೊರಗೆ ಮಾತ್ರವೇ ಮುಸ್ಲಿಮರಿಗೆ ಐದು ಎಕರೆ ಜಮೀನು ಕೊಡಬಹುದು ಎಂದು ಸಂಘಪರಿವಾರ ಹೇಳಿತ್ತು. ಸಾಮುದಾಯಿಕ ಸೌಹಾರ್ದ, ಕಾನೂನು ವ್ಯವಸ್ಥೆ ರಕ್ಷಿಸಲು ಉತ್ತಮವಾದ ಸ್ಥಳ ಇದೆಂದು ಉತ್ತರ ಪ್ರದೇಶ ಸರಕಾರದ ವಕ್ತಾರ ಸಚಿವ ಶ್ರೀಕಾಂತ್ ಶರ್ಮ ಹೇಳಿದರು.
ಇದೇ ತಿಂಗಳ 24ರಂದು ಸೇರುವ ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡು ಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಕ್ಫ ಬೋರ್ಡ್ ವಕ್ತಾರರು ಹೇಳಿದರು. ಜಮೀನು ತಿರಸ್ಕರಿಸುವುದಾಗಿ ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡು, ಜಮ್ಇಯ್ಯತ್ತುಲ್ ಉಲಮಾ ಹಿಂದ್ ತಿಳಿಸಿತ್ತು.












