ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ದಾರುಲ್ ಉಲೂಮ್ ಸಂಸ್ಥೆಯಿಂದ ಕೆಲವು ನೂರು ಮೀಟರ್ ದೂರದಲ್ಲಿರುವ ದಿಯೋಬಂದ್ನ ಈದ್ಗಾದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರುದ್ಧ ಮಹಿಳೆಯರ ಗುಂಪು ಜನವರಿ 27 ರಿಂದ ಶಹೀನ್ ಬಾಗ್ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿವೆ.
ಸ್ಥಳೀಯ ಮಹಿಳೆಯರೇ ಇದರಲ್ಲಿ ಹೆಚ್ಚಿದ್ದು, ಇದನ್ನು ದಿಯೋಬಂದ್ ಸತ್ಯಾಗ್ರಹ ಎಂದು ಅವರು ಕರೆಯುತ್ತಾರೆ ಮತ್ತು ಶಾಹೀನ್ ಬಾಗ್ ಪ್ರತಿಭಟನೆ ತಮಗೆ ಮಾದರಿ ಎಂದು ಹೇಳುತ್ತಾರೆ. ಈ ಸ್ಥಳದಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳಿವೆ, ಆದರೆ ಯಾವುದೇ ಧಾರ್ಮಿಕ ಚಿಹ್ನೆ ಇಲ್ಲ. ಸುಮಾರು 200 ಮಹಿಳೆಯರ ಗುಂಪು ಸಂಜೆಯ ಹೊತ್ತಿಗೆ ಸುಮಾರು ಒಂದು ಸಾವಿರಕ್ಕೆ ಏರುತ್ತದೆ.
ಪ್ರತಿಭಟನೆಯು ದೇಶದ್ರೋಹಿ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಶಾಂತಿಗೆ ಭಂಗ ತಂದಿದೆ ಎಂದು ಆರೋಪಿಸಿ ಜಿಲ್ಲಾಡಳಿತ ಪ್ರತಿಭಟನಾಕಾರರಿಗೆ ನೋಟಿಸ್ ಕಳುಹಿಸಿದ್ದರೂ ಮಹಿಳೆಯರು ನೋಟೀಸನ್ನು ಲೆಕ್ಕಿಸಿಲ್ಲ.
ನಾಗರಿಕರು ನಡೆಸುವ ಪ್ರತಿಭಟನೆಗೆ ಸ್ಥಳೀಯ ರಾಜಕೀಯ ಶಕ್ತಿಗಳು ಅಥವಾ ದಾರುಲ್ ಉಲೂಮ್ ಯಾವುದೇ ಬೆಂಬಲ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ದಾರುಲ್ ಉಲೂಮ್ನ ಇಬ್ಬರು ಹಿರಿಯ ಧರ್ಮಗುರುಗಳು ಪ್ರತಿಭಟನಾಕಾರರೊಂದಿಗೆ ಮಧ್ಯಸ್ಥಿಕೆ ವಹಿಸಲು ಜಿಲ್ಲಾಡಳಿತ ರಚಿಸಿದ ಸಮಿತಿಯ ಭಾಗವಾಗಿದ್ದರು, ಆದರೆ ಅವರು ಮಹಿಳೆಯರನ್ನು ಭೇಟಿ ಮಾಡಲು ಬಂದಿಲ್ಲ ಎಂದು ಮಹಿಳೆಯರು ಹೇಳುತ್ತಾರೆ.
ಪ್ರತಿಭಟನೆಯ ನಾಯಕರಲ್ಲಿ ಒಬ್ಬರಾದ ಇರಮ್ ಉಸ್ಮಾನಿ, “ದಾರುಲ್ ಉಲೂಮ್ ನಮ್ಮನ್ನು ಮನೆಗೆ ಹೋಗಬೇಕೆಂದು ಕೇಳಿದರೆ ಮತ್ತು ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿಯನ್ನು ರದ್ದುಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ನಾವು ಸಂತೋಷದಿಂದ ಹೊರಟು ಹೋಗುತ್ತೇವೆ” ಎಂದು ಹೇಳುತ್ತಾರೆ.
ಕಳೆದ ಗುರುವಾರ, ಜಿಲ್ಲಾಧಿಕಾರಿಗಳು ಸಮುದಾಯದ ಮುಖಂಡರ ಸಭೆಯನ್ನು ಕರೆದಿದ್ದರು, ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸುವ ಬಗ್ಗೆ ಮಹಿಳೆಯರೊಂದಿಗೆ ಮಾತನಾಡಲು ಕೇಳಿಕೊಳ್ಳಲಾಯಿತು. ದಾರುಲ್ ಉಲೂಮ್ ವಕ್ತಾರ ಉಸ್ಮಾನಿಯವರು, “ಸ್ಥಳೀಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು ಆಡಳಿತವು ಶಾಂತಿ ಸಭೆ ಕರೆದರೆ, ಹೋಗುವುದು ನಮ್ಮ ನೈತಿಕ ಕರ್ತವ್ಯ” ಎಂದು ಅವರು ಹೇಳುತ್ತಾರೆ. ಪ್ರತಿಭಟನಾಕಾರರೊಂದಿಗೆ ಮಧ್ಯಸ್ಥಿಕೆ ವಹಿಸಲು ಸಮಿತಿ ರಚಿಸಲಾಗಿದೆ ಎಂದು ದಾರುಲ್ ಉಲೂಮ್ ಸಭೆಯಲ್ಲಿ ಅವರು ಹೇಳಿದರು.
ಈ ನಡುವೆ ಮಹಿಳೆಯರನ್ನು ಸ್ಥಳ ಬಿಟ್ಟು ಹೋಗುವಂತೆ ಕೇಳಲು ಅರ್ಧ ಡಜನ್ ಪುರುಷರು ಪ್ರತಿಭಟನಾ ಸ್ಥಳಕ್ಕೆ ಬಂದಾಗ, ಮಹಿಳೆಯರು ತಮ್ಮ ಬಳೆಗಳನ್ನು ಕಳಚಿ ಅವರಿಗೆ ಕೊಟ್ಟು ಇಲ್ಲಿಂದ ಹೊರಹೋಗುವಂತೆ ಹೇಳಿದರು. ಯಾಕೆಂದರೆ, ಈ ಪುರುಷರಲ್ಲಿ ಯಾರೂ ಅವರನ್ನು ಈ ಮೊದಲು ಬೆಂಬಲಿಸಲಿಲ್ಲ ಎಂದು ಇರಮ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಎನ್ಆರ್ಸಿ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಸರ್ಕಾರ ಹೇಳಿದ್ದರೂ, ವಿಶ್ವಾಸಾರ್ಹತೆಯ ಕೊರತೆ ಇದೆ ಎಂದು ಇರಮ್ ಉಸ್ಮಾನಿ ಹೇಳುತ್ತಾರೆ, ಏಕೆಂದರೆ ಕೇಂದ್ರದ ವಿಭಿನ್ನ ನಾಯಕರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಚರ್ಚೆ ನಡೆದಿಲ್ಲ ಅಂದರೆ ಅರ್ಥವೇನು? ಎನ್ಆರ್ಸಿಯನ್ನು ಜಾರಿಗೆ ತರಲಾಗುವುದು ಎಂದು ನಾಳೆ ರಾತ್ರಿ 8 ಗಂಟೆಗೆ ಪ್ರಧಾನಿ ಪ್ರಕಟಣೆ ನೀಡಿದರೆ? ಆ ಬಳಿಕ ಏನು? ಎಂದವರು ಪ್ರಶ್ನಿಸುತ್ತಾರೆ.
ಕೃಪೆ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್












