ಮಾಸ್ಕೊ ಮೆಟ್ರೊದಲ್ಲಿ ಕೊರೊನಾ ಬಾಧಿಸಿದವನಂತೆ ನಟನೆ: ವಿಡಿಯೋ- ಯುವಕನಿಗೆ ಐದು ವರ್ಷ ಜೈಲು

0
1343

ಸನ್ಮಾರ್ಗ ವಾರ್ತೆ

ಮಾಸ್ಕೋ, ಫೆ. 12: ಜಗತ್ತು ಕೊರೊನಾ ಹೆದರಿಕೆಯಲ್ಲಿರುವಾಗ ಮಾಸ್ಕೊ ಮೆಟ್ರೊದಲ್ಲಿ ಕ್ರೂರವಾದ ತಮಾಶೆ ರಂಗೇರಿತ್ತು. ಮೆಟ್ರೊದಲ್ಲಿ ಹೋಗುವಾಗ ಮಾಸ್ಕ್ ಧರಿಸಿದ ಯುವಕ ಕೊರೊನಾ ಬಾಧಿಸಿದವನಂತೆ ಕುಸಿದು ಬಿದ್ದ. ಹೆದರಿದ ಪ್ರಯಾಣಿಕರು ಇಳಿದು ಓಡಿದರು. ನಂತರ ಪೊಲೀಸರು ಯುವಕನನ್ನು ಹಿಡಿದುಕೊಂಡು ಹೋದರು. ಈತನಿಗೆ ಕೋರ್ಟು ಐದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ತಿಂಗಳು ಎರಡನೇ ತಾರೀಕಿಗೆ ಮಾಸ್ಕೊದ ಭೂಗರ್ಭ ಮೆಟ್ರೊದಲ್ಲಿ ಘಟನೆ ನಡೆದಿತ್ತು.

ತಮಾಶೆ ವೀಡಿಯೊ ಪೋಸ್ಟ್ ಮಾಡುವ ತಜಕಿಸ್ತಾನದ ಕರೊಮತ್ ಶಾಬೊರೋವ್ ಎಂಬವ ಕೊರೊನಾ ಪೀಡಿತನಂತೆ ವರ್ತಿಸಿದ್ದನು. ಈತನಿಗೆ ಸಹಾಯ ಮಾಡುವುದಕ್ಕೆ ಎಂಬಂತೆ ಗೆಳೆಯರು ಓಡಿ ಬಂದರು. ಶಾಬೊರೊವ್ ನೆಲಕ್ಕೆ ಬಿದ್ದು ಚಡಪಡಿಸಿದಾಗ ಅವರು ಕೊರೊನಾ ವೈರಸ್, ಕೊರನಾ ವೈರಸ್ ಎಂದು ಬೊಬ್ಬಿಟ್ಟರು. ಇದನ್ನು ಕೇಳಿ ಜನರು ದಿಕ್ಕೆಟ್ಟು ಓಡಿದ್ದಾರೆ.

ನಂತರ ಶಾಬರೋವ್ ಕರಪ್ರಾಂಕ್ ಎಂಬ ಇನ್ಸ್ಟಾಗ್ರಾಮ್, ಯುಟ್ಯೂಬ್ ಅಕೌಂಟಿನಲ್ಲಿ ವೀಡಿಯೊ ಪ್ರಚಾರ ಮಾಡಿದ್ದಾನೆ. ಅದು ವೈರಲ್ ಆಗಿದ್ದು ವಿವಾದ ಸ್ವರೂಪ ಪಡಕೊಂಡ ಕೂಡಲೇ ಪೊಲೀಸರು ಶಾಬರೋವ್‍ನನ್ನು ಬಂಧಿಸಿದ್ದಾರೆ. ಸಾರ್ವಜನಿಕರು ಹೆದರುವಂತೆ ಮಾಡಿದ ತಂಟೆಕೋರ ಅಪರಾಧಕ್ಕೆ ಈತನಿಗೆ ಕೋರ್ಟು ಐದು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಾನು ಕೊರೊನಾ ಜಾಗೃತಿಯ ಭಾಗವಾಗಿ ಇದನ್ನು ಮಾಡಿದ್ದೇನೆಂದು ಕೋರ್ಟಿನಲ್ಲಿ ಶೊಬರೋವ್ ವಾದಿಸಿದರೂ ಕೋರ್ಟು ಪುರಸ್ಕರಿಸಲಿಲ್ಲ. ಇಬ್ಬರು ಸಂಗಡಿಗರನ್ನು ಗುರುತಿಸಿ ಅವರನ್ನು ಮಾಸ್ಕೊ ತೊರೆಯುವಂತೆ ರಶ್ಯನ್ ಗೃಹಸಚಿವಾಲಯ ಆದೇಶಿಸಿದೆ.