ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 13: ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ಅತಿಕ್ರಮದಲ್ಲಿ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹನ್ನೊಂದಕ್ಕೂ ಹೆಚ್ಚು ಪೊಲೀಸ್ ತಂಡಗಳು ತನಿಖೆ ಮಾಡಿತ್ತು. ಆರೋಪಿಗಳನ್ನು ಹುಡುಕಾಡಿತ್ತು. ಅಂತಿಮವಾಗಿ ಹತ್ತು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣದಲ್ಲಿ ಕಾಲೇಜು ಅಧಿಕಾರಿಗಳ ಸಹಿತ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದರು.
ಕಳೆದ ಗುರುವಾರ ಕಾಲೇಜು ಫೆಸ್ಟಿವಲ್ ಸಂದರ್ಭದಲ್ಲಿ ಸಂಜೆಯ ಆರುಗಂಟೆಗೆ ಘಟನೆ ನಡೆದಿತ್ತು. ಮದ್ಯಪಾನಿ ತಂಡವೊಂದು ಕಾಲೇಜಿನ ಗೇಟಿಗೆ ಬಂದು ವಿದ್ಯಾರ್ಥಿಗಳನ್ನು ತಡೆದಿಟ್ಟು ಕ್ಯಾಂಪಸ್ಸಿಗೆ ನುಗ್ಗಿ ವಿದ್ಯಾರ್ಥಿನಿಗಳಿಗೆ ಲೈಂಗಿಕ ಉಪಟಳ ನೀಡಿತ್ತು. ಕಾಲೇಜು ಸಮೀಪದಲ್ಲಿ ನಡೆದಿದ್ದ ಸಿಎಎ ಪರ ರ್ಯಾಲಿಗೆ ಬಂದವರು ಈ ಗುಂಪಿನಲ್ಲಿದ್ದರೆಂದು ವಿದ್ಯಾರ್ಥಿನಿಯರು ತಿಳಿಸಿದ್ದರು.
ಘಟನೆಯ ಕುರಿತು ಪೊಲೀಸರು ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದ್ದರು. ಹೌಸ್ ಕಾಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಅಡಿಷನಲ್ ಡೆಪ್ಯುಟಿ ಕಮಿಶನರ್ ಗೀತಾಂಜಲಿ ಖಂಡೇವಾಲ್, ಡೆಪ್ಯುಟಿ ಕಮಿಶನರ್ ಅತುಲ್ ಠಾಕೂರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಸ್ಥಳೀಯವಾಗಿ ಸಿಕ್ಕಿದ ಸಿಸಿಟಿವಿ ದೃಶ್ಯಗಳು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿಯನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದರು.












