ಫೈಝಲ್ ಬಿನ್ ಇಸ್ಮಾಈಲ್
ಹೀಗೊಂದು ಪ್ರಶ್ನೆಯು ರಾಜಧಾನಿಯ ಚುನಾವಣಾ ಫಲಿತಾಂಶ ನೋಡಿದ ಬಳಿಕ ಹಲವರಲ್ಲಿ ಮೂಡುತ್ತಿದೆ. ಇದನ್ನರಿತ ಚುನಾವಣಾ ಆಯೋಗದ ಮುಖ್ಯಸ್ಥರು “EVMನ್ನು ತಿರುಚಲು ಸಾಧ್ಯವೇ ಇಲ್ಲ, ಬ್ಯಾಲೆಟ್ ಪೇಪರ್ ಗೆ ಹಿಂದಿರುಗುವ ವಿಷಯವೇ ಇಲ್ಲ” ಎಂದು ಮೊನ್ನೆ ಸಾರಾಸಗಟಾಗಿ ಹೇಳಿದ್ದಾರೆ.
ನಿಜವಾಗಿಯೂ EVM ಮೆಶಿನ್ ಮೋಸ ನಡೆದಿರಲಿಕ್ಕಿಲ್ಲವೇ?
ನಮಗಂತೂ EVM ಮೆಶೀನಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ಬೀಳುವ ಮತಗಳಿಂದ ಇಂತಿಷ್ಟು ಶೇಕಡಾವಾರು ಮತಗಳನ್ನು EVMನ Software ಮೂಲಕ ತನಗೆ ಪರಿವರ್ತನೆ ಆಗುವಂತೆ BJPಯು ಮೊದಲೇ ವ್ಯವಸ್ಥೆ ಮಾಡಿಕೊಳ್ಳುತ್ತಿದೆಯೇನೊ ಎಂದನ್ನಿಸುತ್ತಿದೆ. ಅದಕ್ಕಾಗಿಯೇ ಚುನಾವಣಾ ಆಯೋಗವನ್ನು ಬಿಜೆಪಿಯು ಕೈಗೊಂಬೆಯಂತೆ ಉಪಯೋಗಿಸುತ್ತಾ ಇದೆಯೇ? ಏಕೆಂದರೆ, ಇದಕ್ಕೆ ಅನ್ವರ್ಥವಾಗುವಂತೆ ಚುನಾವಣಾ ಆಯೋಗದ ವರ್ತನೆಯು ಸಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಸಣ್ಣ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಿಸುವ ಆಯೋಗವು, BJPಯ ಮುಖ್ಯ ಅಜೆಂಡವಾಗಿದ್ದ “ಶಾಹೀನ್ ಬಾಗ್”ನ ಪ್ರತಿಭಟನೆಯನ್ನು ತೆರವುಗೊಳಿಸದೇ ಇದ್ದದ್ದು. BJP ನಾಯಕರು ನೀತಿ ಸಂಹಿತೆ ಉಲ್ಲಂಘಿಸಿದರೆ, ಸಣ್ಣ ಮಟ್ಟಿನ ಕ್ರಮ ಮಾತ್ರ ತೆಗೆದುಕೊಳ್ಳುವುದು. ಚುನಾವಣೆ ಮುಗಿದ ತಕ್ಷಣವೇ ಆಯಾಯ ಮತಗಟ್ಟೆಯ ವೋಟಿಂಗ್ ಪರ್ಸಂಟೇಜ್ ವಿವರ ಮುಖ್ಯ ಕಚೇರಿಗೆ ಹೋಗಿ, ಒಂದೆರಡು ತಾಸಿನಲ್ಲಿ ಘೋಷಣೆಯಾಗಬೇಕಾದ್ದು, 9 ತಾಸುವರೆಗೆ ಆಗದ್ದು. ಬ್ಯಾಲೆಟ್ ಪೇಪರಿನಲ್ಲಿ ಪಾರದರ್ಶಕ ಚುನಾವಣೆ ನಡೆಯಲಿ ಎಂಬ ಜನರ ಬೇಡಿಕೆಯನ್ನು ಪದೇ ಪದೇ ತೀವ್ರವಾಗಿ, ನಿರಾಕರಿಸುತ್ತಿರುವುದು… ಹೀಗೆ ಕಾರಣಗಳು ಹಲವು ಇವೆ.
ಕೇವಲ 8 ಸೀಟುಗಳನ್ನು ಪಡೆದ BJPಯು ಹೇಗೆ 39 ಶೇಕಡಾ ಮತಗಳನ್ನು ಗಳಿಸಿಯೂ ಅದರ ಲೆಕ್ಕಾಚಾರ ಹೇಗೆ ತಲೆ ಕೆಳಗಾಗಿದೆ ಎಂದು ನೋಡಿ. ನಿಜವಾಗಿಯೂ, 35ರಿಂದ 40 ಶೇಕಡಾವಾರು ಮತ ಪಡೆಯುವ ಪಕ್ಷವು ಗೆಲುವಿನ ಸಮೀಪದಲ್ಲಿರುತ್ತೆ ಅಥವಾ ಗೆಲ್ಲುತ್ತದೆ ಎಂಬುದು ಸಾಮಾನ್ಯ ವಿಚಾರ.
ಆದ್ದರಿಂದ, ಬಹುಶಃ ದೆಹಲಿಯಲ್ಲಿ BJPಯ ಗುಣಾಕಾರ, ಭಾಗಾಕಾರ ಈ ರೀತಿ ಇದ್ದಿರಬಹುದು. ಅದೆಂದರೆ ಕಾಂಗ್ರೆಸ್ 15 ಪರ್ಸೆಂಟಿಗಿಂತ ಹೆಚ್ಚು ಮತ ಗಳಿಸುತ್ತದೆ ಮತ್ತು ಅದರಿಂದ 5 ಪರ್ಸೆಂಟನ್ನು EVMನ ಮೂಲಕ ಮೊದಲೇ ಸೆಳೆದಿಡುವುದು. ಅದರೊಂದಿಗೆ AAPಗೆ ಬೀಳುವ ಮತದಲ್ಲಿ 8% ಪರ್ಸೆಂಟನ್ನು EVMನ ಮೂಲಕ ತನಗೇ ಪರಿವರ್ತನೆಯಾಗುವಂತೆ ಮಾಡಿಡುವುದು. ಹೀಗಾದರೆ, ಕಾಂಗ್ರೆಸಿನಲ್ಲಿ ಉಳಿಯುವ 10ಕ್ಕಿಂತ ಹೆಚ್ಚು ಪರ್ಸೆಂಟ್ ಮತಗಳು AAPಯ ಮತಗಳ ಅಂತರವನ್ನು ಕಡಿತಗೋಳಿಸಿ, BJPಯು ಸಣ್ಣ ಅಂತರದಲ್ಲಾದರೂ ಆಯಾಯ ಕ್ಷೇತ್ರದಲ್ಲಿ ಸ್ಥಾನ ಪಡೆಯಬಹುದು ಎಂದು.
ಈ ಲೆಕ್ಕಾಚಾರವೇ ಚುನಾವಣೆ ನಡೆದ ಬಳಿಕ ಅಮೀತ್ ಶಾ “13ರ ತಾರೀಖಿನ ಫಲಿತಾಂಶ ನೋಡಿ ನೀವೇ ಶಾಕ್ ಆಗುವಿರಿ” ಎಂದು ದೇಶವನ್ನುದ್ದೇಶಿಸಿ ಹೇಳಿದ್ದಾಗಿರಬಹುದು. ಒಂದು ವೇಳೆ ಸ್ವಲ್ಪ ಕಮ್ಮಿಯಾದರೂ ಚಿಂತಿಲ್ಲ. ನಮ್ಮಲ್ಲಿ ಆಪರೇಶನ್ ಕಮಲ, ಕುದುರೆ ವ್ಯಾಪಾರ ಇದ್ದೇ ಇದೆಯಲ್ಲ ಎಂದು ಕೂಡಾ ಮನದಲ್ಲೇ ಊಹಿಸಿರಬಹುದು. AAPಯಲ್ಲಿ ಗೆದ್ದಿರುವ ಹೆಚ್ಚಿನ ಶಾಸಕರು ಪಡೆದ ಮತಗಳ ಅಲ್ಪ ಅಂತರವು ಇದನ್ನು ಸಾಬೀತು ಪಡಿಸುತ್ತದೆ.
ಇಲ್ಲವಾದರೆ, ಇದಕ್ಕೂ ಮೊದಲು ಸತತ 15 ವರ್ಷ ಈ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷ ಕೇವಲ ನಾಲಕ್ಕು ಪರ್ಸೆಂಟಿನಷ್ಟು ಮಾತ್ರ ಮತ ಗಳಿಸಿದೆ ಎಂದು ನಾವು-ನೀವು ಬಿಡಿ, BJPಗೇ ನಂಬಲು ಸಾಧ್ಯವೇ? 2015ರಲ್ಲಿ ದೆಹಲಿಯಲ್ಲಿ ಸಂಪೂರ್ಣ ಕಾಂಗ್ರೆಸ್ ವಿರೋಧಿ ಅಲೆಯಿದ್ದೂ, 9 ಪರ್ಸೆಂಟಿನಷ್ಟು ಮತವನ್ನು ಅಂದು ಪಡೆದಿತ್ತು. ಏನಿಲ್ಲದಿದ್ದರೂ, ಪರಂಪರಾಗತ ಕಾಂಗ್ರೆಸ್ಸಿಗರು ಕಾಂಗ್ರೆಸನ್ನು ಬೆಂಬಲಿಸಿರಬಹುದಲ್ವೇ?
ಇಂತಹ ಗುಮಾನಿಗೆಲ್ಲಾ ಈ ಕೆಳಗಿನ ವಿಷಯಗಳೇ ಮುಖ್ಯ ಕಾರಣ.
ಮೊನ್ನೆಯ ಚುನಾವಣೆಯಲ್ಲಿ AAP ಪಕ್ಷವು ಪ್ರಮುಖವಾಗಿ ಉಚಿತ ವಿದ್ಯುತ್, ಶಿಕ್ಷಣ, ನೀರು, ಮಹಿಳೆ ಬಸ್ ಪ್ರಯಾಣ ಹಾಗೂ ಉತ್ತಮ ರಸ್ತೆಗಳ ಸಾಧನೆಯನ್ನು ಜನರ ಮುಂದಿಟ್ಟಿತ್ತು. ಅದರಲ್ಲೂ ಶಿಕ್ಷಣದಲ್ಲಾದ ಬದಲಾವಣೆಯು, ಬಡವ, ಮಧ್ಯಮ ಹಾಗೂ ಶ್ರೀಮಂತ ವರ್ಗವನ್ನು ಕೂಡಾ ಹೆಚ್ಚು ಆಕರ್ಷಿಸಿತ್ತು. “ಸರಕಾರಿ ಶಾಲೆಗೆ ಹೋಗುವ ನನ್ನ ಮಗ ನನ್ನೆದುರಲ್ಲೇ, ಪಟಪಟನೇ ಇಂಗ್ಲೀಷ್ ಉಚ್ಛರಿಸುವಾಗ ನಾನು ಪುಳಕಿತನಾಗುತ್ತೇನೆ” ಎಂದು ಹೆಮ್ಮೆಯಿಂದ ಹೇಳುವ ಸೈಕಲ್ ರಿಕ್ಷಾವಾಲಾ ಹಾಗೂ Conventನಲ್ಲಿ ಕಲಿಯುವ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವ ಮಧ್ಯಮ ವರ್ಗಿಯರ ಮೇಲೆ ಈ ಶಿಕ್ಷಣ ಕ್ರಾಂತಿ ಎಷ್ಟು ಪ್ರಭಾವ ಬೀರಿರಬಹುದೆಂದು ಎಂದು ಅಂದಾಜಿಸಬಹುದಾಗಿದೆ. ಈ ಬದಲಾವಣೆಯ ಮುಖ್ಯ ರೂವಾರಿಯಾಗಿದ್ದ Education Minister ಹಾಗೂ AAPಯ 2ನೇ ಪ್ರಮುಖ ನಾಯಕ ಮನೀಶ್ ಸಿಸೋಡಿಯ, ಕೇವಲ 3 ಸಾವಿರ ಗೆಲುವಿನ ಅಂತರದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಹಾಗೆಯೇ, ಇಡೀ ದೆಹಲಿಯೇ ಕೇಜ್ರಿವಾಲರ ಮುಖ ನೋಡಿ ಮುದ್ರೆಯೊತ್ತಿದ್ದರೂ, ತನ್ನ ಸ್ವ ಕ್ಷೇತ್ರದಲ್ಲಿಯೇ ಅವರು 21 ಸಾವಿರ ಮತದ ಗೆಲುವಿನ ಅಂತರಕ್ಕೆ ತೃಪ್ತಿಯಾಗಬೇಕಾಯಿತು. ನಿಜಕ್ಕೂ ಇದೆಲ್ಲಾ ಅರಗಿಸಿಕೊಳ್ಳುವಂತಹ ಅಂತರವೇ? ಇದೆಲ್ಲಾ ಪ್ರಾರಂಭದ ವಿಚಾರಗಳನ್ನು ಸಮರ್ಥಿಸುವುದಿಲ್ಲವೇ?
ಈ ಸಂದರ್ಭದಲ್ಲಿ ಕರ್ನಾಟಕದ ಜನಪರ ನಾಯಕ ಶ್ರೀ ಸಿದ್ಧರಾಮಯ್ಯನವರು ನೆನಪಿಗೆ ಬರುತ್ತಾರೆ. ಕಳೆದ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಒಂದರಲ್ಲಿ ಸೋತು, ಇನ್ನೊಂದರಲ್ಲಿ ಕೇವಲ ಒಂದೂವರೆ ಸಾವಿರ ಅಂತರದಿಂದ ಗೆದ್ದಿದ್ದರು.
ಏನೇ ಇರಲಿ, ಸುಪ್ರೀಮ್ ಕೋರ್ಟೇ “EVM ನ ಬಗ್ಗೆ ಪಾರದರ್ಶಕ ಸರ್ಟಿಫಿಕೇಟ್ ಕೊಟ್ಟಿಲ್ಲದಿರುವಾಗ ನಮ್ಮ ವಾದವನ್ನು ಸಡಿಲಗೊಳಿಸದೆ ಸುಪ್ರೀಮ್ ಕೋರ್ಟಿನ ಅಭಿಪ್ರಾಯವನ್ನು ಧ್ಯೇಯವಾಗಿಸಿ, ಮುಂದಿನ ಚುನಾವಣೆಗಳು ಬ್ಯಾಲೆಟ್ ಪೇಪರಿನಲ್ಲೇ ನಡೆಸಬೇಕೆಂದು ಒತ್ತಾಯಿಸಬೇಕು. ಮತ್ತು ಅದು ಪೂರ್ತೀಕರಿಸುವ ವರೆಗೆ ದೇಶದುದ್ದಗಲಕ್ಕೂ ತೀವ್ರತರದ ಹೋರಾಟಗಳು ನಡೆಯಬೆಕಾಗಿದೆ. ಇಲ್ಲವಾದಲ್ಲಿ, ಚುನಾವಣೆಯಂದು ಮತ ನೀಡಿ ಬಂದು, ನಿಗದಿತ ದಿನಾಂಕದಂದು Softwerನಲ್ಲಿ ಮತ ಪರಿವರ್ತನೆಯಾದಾಗ ‘ಇಂಗು ತಿಂದ ಮಂಗ’ನ ಅವಸ್ಥೆ ನಮ್ಮದಾಗಬಹುದು.












