2024ಕ್ಕಿಂತ ಮೊದಲು ಪುನಃ ಪುಲ್ವಾಮದಂತಹ ಘಟನೆ ನಡೆಯಲಿದೆ: ಕಾಂಗ್ರೆಸ್ ನಾಯಕ ಉದಿತ್‍ರಾಜ್ ವಿವಾದ ಹೇಳಿಕೆ

0
1305

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 15: ಪುಲ್ವಾಮ ಕುರಿತ ವಿವಾದಾತ್ಮಕ ಹೇಳಿಕೆ ಸರಣಿ ಮುಂದುವರಿದಿದೆ. ಕಾಂಗ್ರೆಸ್ ನಾಯಕ ಉದಿತ್ ರಾಜ್ ಮತ್ತೊಮ್ಮೆ 2024ರೊಳಗೆ ಪುಲ್ವಾಮ ರೀತಿಯ ದಾಳಿ ನಡೆಯಲಿದೆ ಎಂದು ಮಾಧ್ಯಮಗಳಿಗೆ ಭವಿಷ್ಯ ನುಡಿದು ವಿವಾದ ಹುಟ್ಟು ಹಾಕಿದ್ದಾರೆ. ಮೋದಿ ಸರಕಾರ ಅಧಿಕಾರದಲ್ಲಿ ಉಳಿಯಲಿಕ್ಕಾಗಿ ನಲ್ವತ್ತು ಮಂದಿ ಯೋಧರ ಜೀವ ಅಪಾಯಕ್ಕೊಡ್ಡಿತು. ಬಿಜೆಪಿ ಪುಲ್‍ವಾಮವನ್ನು ಚುನಾವಣಾ ವಿಷಯ ಮಾಡಿ 2019ರಲ್ಲಿ ಲೋಕಸಭಾ ಚುನಾವಣೆ ಗೆದ್ದಿತು. ಜೊತೆಗೆ ರಾಹುಲ್ ಗಾಂಧಿ ಪುಲ್ವಾಮ ಕುರಿತು ನೀಡಿದ ಹೇಳಿಕೆಯನ್ನು ಉದಿತ್ ರಾಜ್ ಸಮರ್ಥಿಸಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿ ಹದಿನಾಲ್ಕರಂದು ಪುಲ್ವಾಮ ಭಯೋತ್ಪಾದಕ ಡಾಳಿ ನಡೆದಿತ್ತು. ಅರೆಸೇನಾ ಪಡೆಯ ವಾಹನಕ್ಕೆ ಮಾನವಬಾಂಬ್ ಸ್ಫೋಟ ನಡೆದಿತ್ತು. ಸಿಆರ್‍ಪಿಎಫ್‍ನ 40 ಮಂದಿ ಯೋಧರು ಮೃತಪಟ್ಟಿದ್ದರು.

ಶುಕ್ರವಾರ ಪುಲ್ವಾಮ ಘಟನೆಯನ್ನು ರಾಹುಲ್ ಗಾಂಧಿ ಸ್ಮರಿಸಿಕೊಳ್ಳುತ್ತಾ ಸರಕಾರದ ವಿರುದ್ಧ ಉಗ್ರ ಟೀಕೆ ಮಾಡಿದ್ದರು, ಕೊನೆಗೂ ಈ ಘಟನೆಯಿಂದ ಅತಿ ಹೆಚ್ಚು ಪ್ರಯೋಜನವನ್ನು ಯಾರು ಎತ್ತಿಕೊಂಡರು, ಇದರ ತನಿಖೆಯಿಂದ ಏನು ಪತ್ತೆಯಾಗಿದೆ, ಸರಕಾರದ ಯಾವ ವ್ಯಕ್ತಿ ಇದಕ್ಕೆ ಜವಾಬ್ದಾರರು ಎಂದು ಪ್ರಶ್ನಿಸಿದ್ದರು. ಪುಲ್ವಾದಲ್ಲಿ ಮೃತಪಟ್ಟ ಯೋಧರ ಕುರಿತ ಫೋಟೊ ಶೇರ್ ಮಾಡಿ ಈ ದಾಳಿಯಿಂದ ಹೆಚ್ಚು ಪ್ರಯೋಜನ ಯಾರಿಗಾಯಿತು ಮತ್ತು ಈ ಘಟನೆಯ ತನಿಖೆಯ ಗತಿಯೇನಾಯಿತು? ದಾಳಿಯಲ್ಲಿ ಸುರಕ್ಷಾ ಲೋಪವಾಗಿದ್ದು ಇದಕ್ಕೆ ಬಿಜೆಪಿ ಸರಕಾರದಲ್ಲಿ ಹೊಣೆ ಯಾರು ಎಂದು ಪ್ರಶ್ನಿಸಿದ್ದರು.