ಮಣಿಪುರ | ಕಲಬೆರಕೆ ಮದ್ಯ ಸೇವಿಸಿ 11 ಮಂದಿ ಸಾವು, 180ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

0
3

ಸನ್ಮಾರ್ಗ ವಾರ್ತೆ

ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಕಲಬೆರಕೆ ಮದ್ಯ ಸೇವಿಸಿ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ 180ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರೆಲ್ಲರೂ 32 ರಿಂದ 50 ವರ್ಷ ವಯಸ್ಸಿನ ಪುರುಷರಾಗಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ (The Times of India) ವರದಿ ಮಾಡಿದೆ.

ನೆರೆಯ ಕಕ್ಚಿಂಗ್ ಜಿಲ್ಲೆಯ ಸುಗ್ನುವಿನಿಂದ ಈ ಮದ್ಯವನ್ನು ಖರೀದಿಸಲಾಗಿತ್ತು ಎಂದು ಚಂದೇಲ್ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಹೇಳಿರುವುದಾಗಿ ವರದಿಯಾಗಿದೆ.

ಚಂದೇಲ್‌ನಲ್ಲಿ ಸಂಭವಿಸಿದ ಸಾವುಗಳ ಹಿನ್ನೆಲೆಯಲ್ಲಿ, ಕಕ್ಚಿಂಗ್‌ನ ಅಧಿಕಾರಿಗಳು ಸಾರ್ವಜನಿಕರಿಗೆ “ಸ್ಥಳೀಯವಾಗಿ ತಯಾರಿಸಿದ ಮದ್ಯ ಅಥವಾ ಅನುಮಾನಾಸ್ಪದ ಮೂಲದ ಮದ್ಯಪಾನೀಯಗಳನ್ನು, ವಿಶೇಷವಾಗಿ ಪೀಡಿತ ಪ್ರದೇಶಗಳಲ್ಲಿನ ಶಂಕಿತ ಮೂಲಗಳಿಂದ ಬರುವ ಮದ್ಯವನ್ನು ಸೇವಿಸುವುದರಿಂದ ದೂರವಿರುವಂತೆ” ಸಲಹೆ ನೀಡಿದ್ದಾರೆ.

ಮದ್ಯ ಸೇವಿಸಿದ ನಂತರ ವಾಂತಿ, ಹೊಟ್ಟೆ ನೋವು, ತಲೆತಿರುಗುವಿಕೆ ಮತ್ತು ಮಂದ ದೃಷ್ಟಿಯಂತಹ ಲಕ್ಷಣಗಳು ಕಂಡುಬರುವ ಯಾವುದೇ ವ್ಯಕ್ತಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯುಮ್ನಮ್ ಖೇಮ್‌ಚಂದ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಸಿಂಗ್ ಅವರು ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿದ್ದ ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿದರು.