ಭಾರತದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡರಿಗೆ ಕಿರಣ್ ರಿಜಿಜು ಆಹ್ವಾನ: ಕಂಬಳ ಗದ್ದೆಯಿಂದ ರಾಷ್ಟ್ರೀಯ ಟ್ರ್ಯಾಕ್ ಗೆ; ವಿಡಿಯೋ

0
638

ಸನ್ಮಾರ್ಗ ವಾರ್ತೆ

ಮಂಗಳೂರು: ಫೆ. 15- ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಿಯಾರಿನ ಯುವಕ ಶ್ರೀನಿವಾಸಗೌಡ ಅವರು ಕಂಬಳ ಗದ್ದೆಯಿಂದ ರಾಷ್ಟ್ರಮಟ್ಟದ ಟ್ರ್ಯಾಕ್ ಗೆ ಸಾಗುವ ಅದೃಷ್ಟವನ್ನು ಪಡೆದುಕೊಂಡಿದ್ದಾರೆ.

ಅವರಿಗೆ ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ ಮಹಿಂದ್ರಾ ತಮ್ಮ ಟ್ವೀಟರ್ ನಲ್ಲಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕಂಬಳಗದ್ದೆಯ ಉಸೇನ್ ಬೋಲ್ಟ್ ಎಂಬ ಹೆಸರನ್ನು ಪಡೆದುಕೊಂಡಿರುವ ಶ್ರೀನಿವಾಸಗೌಡರು 100 ಮೀಟರ್ ಓಟದಲ್ಲಿ ಉಸೇನ್ ಬೋಲ್ಟ್ ದಾಖಲಿಸಿದ್ದ ದಾಖಲೆಯನ್ನು ಮುರಿದು ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಫೆಬ್ರವರಿ ಒಂದರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸಗೌಡ ಅವರು 142.50 ಮೀಟರ್ ಕರೆ (ಕಂಬಳ ಕೋಣ ಟ್ರ್ಯಾಕ್)ಯನ್ನು ಕೇವಲ 13.62 ಸೆಕೆಂಡುಗಳಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಶ್ರೀನಿವಾಸ ಗೌಡರನ್ನು ಈ ಕಾರಣಕ್ಕಾಗಿ ಉಸೇನ್ ಬೋಲ್ಟ್ ಅವರಿಗೆ ಹೋಲಿಸಲಾಗುತ್ತದೆ. ಈ ಕುರಿತು ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀನಿವಾಸಗೌಡ ಸಾಧನೆಯ ಕುರಿತ ಲೇಖನವನ್ನು ಟ್ವೀಟರ್ ನಲ್ಲಿ ಆನಂದ ಮಹಿಂದ್ರಾ ಹಂಚಿಕೊಂಡಿದ್ದು ಮೆಚ್ಚುಗೆ ಸೂಚಿಸಿದ್ದಾರೆ.

ಇದೇ ವೇಳೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಉದ್ಯಮಿ ಆನಂದ ಮಹಿಂದ್ರಾ ಟ್ವೀಟ್ ಗೆ ರೀಟ್ವೀಟ್ ಮಾಡಿದ್ದು ಭಾರತೀಯ ಕ್ರೀಡಾ ಪ್ರಾಧಿಕಾರದ ಅಗ್ರ ಕೋಚ್ ಗಳೊಂದಿಗೆ ತರಭೇತಿಯಲ್ಲಿ ಕರ್ನಾಟಕದ ಶ್ರೀನಿವಾಸ ಗೌಡರನ್ನು ಸೇರಿಕೊಳ್ಳಲು ಆಹ್ವಾನಿಸುತ್ತೇನೆ ಎಂದಿದ್ದಾರೆ.

ಶ್ರೀನಿವಾಸ ಗೌಡರು ಕಂಬಳ ಓಟದಲ್ಲಿ 142.50 ಮೀಟರ್ ದೂರವನ್ನು 13.62 ಸೆಕೆಂಡುಗಳಲ್ಲಿ ಓಡಿದ್ದು ಈ ಹಾದಿಯಲ್ಲಿ 100 ಮೀಟರ್ ದೂರವನ್ನು 9.95 ಸೆಕೆಂಡುಗಳಲ್ಲಿ ಕ್ರಮಿಸಿದ್ದರು. ಉಸೇನ್ ಬೋಲ್ಟ್ ಇಷ್ಟೇ ದೂರವನ್ನು 9.98 ಸೆಕೆಂಡುಗಳಲ್ಲಿ ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿದ್ದರು.