ಮಂಗಳೂರು : ಕಳೆದ ಫೆಬ್ರವರಿ 11 ರಂದು ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಕೆಳಗಿನ ಮಲಾರ್ ಎಂಬಲ್ಲಿ ಮದ್ರಸಾಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿ ಬಳಿಕ ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿರುವ ಘಟನೆಯು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು, ಇದು ಖಂಡನೀಯ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ದ.ಕ. ಜಿಲ್ಲಾ ಘಟಕವು ತಿಳಿಸಿದೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾ ನಿಯೋಗವು ವಿದ್ಯಾರ್ಥಿನಿಯರು, ಪೋಷಕರು ಹಾಗೂ ಸ್ಥಳೀಯರನ್ನು ಭೇಟಿ ಮಾಡಿ, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು.
ದ.ಕ. ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲು. ಇಂತಹ ಘಟನೆಯ ಮೂಲಕ ಸ್ಥಳೀಯ ಜನರ ನಡುವೆ ಇರುವ ಸೌಹಾರ್ದತೆಯನ್ನು ಕೆಡವಲು ನಡೆಸಿರುವ ವ್ಯವಸ್ಥಿತ ಹುನ್ನಾರವಾಗಿದೆ. ಆದ್ದರಿಂದ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್ ಐ ಓ ದ.ಕ. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಸಫ್ವಾನ್ ಸತ್ತಾರ್ ಆಗ್ರಹಿಸಿದ್ದಾರೆ.
ಈ ಘಟನೆಯಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಅಮಾಯಕರೆಂದು ಬಿಂಬಿಸುವ ಯತ್ನವನ್ನು ಎಸ್ ಐ ಓ ಖಂಡಿಸಿದ್ದು, ಘಟನೆಯನ್ನು ಅವಲೋಕಿಸಿದಾಗ ಇದು ಪೂರ್ವ ನಿಯೋಜಿತ ಕೃತ್ಯ. ಮದ್ರಸಾ ವಿದ್ಯಾರ್ಥಿನಿಯರನ್ನು ಗುರಿ ಮಾಡಿ, ಸ್ಥಳೀಯ ಕೋಮು ಸಾಮರಸ್ಯವನ್ನು ಕದಡುವಂತಹಾ ಯೋಜನೆಯ ಭಾಗವಾಗಿದೆ. ಈ ಘಟನೆಯು ಗ್ರಾಮೀಣ ಪ್ರದೇಶದಲ್ಲಿರುವ ಶಾಲಾ-ಕಾಲೇಜು, ಮದ್ರಸಾ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ರವರು ಪೊಲೀಸ್ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸುವಂತಹಾ ಯೋಜನೆ ರೂಪಿಸಿ, ಸಾರ್ವಜನಿಕರ ಮಧ್ಯೆ ಉಂಟಾಗಿರುವ ಭಯವನ್ನು ಹೋಗಲಾಡಿಸಬೇಕೆಂದು ಸಫ್ವಾನ್ ಸತ್ತಾರ್ ಆಗ್ರಹಿಸಿದ್ದಾರೆ.
ಈ ನಿಯೋಗದಲ್ಲಿ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷರಾದ ಆಶಿಕ್ ಹಶಾಶ್, ಉಳ್ಳಾಲ ಕಾರ್ಯದರ್ಶಿ ತಾಜುದ್ದೀನ್, ಜಮಾಅತೆ ಇಸ್ಲಾಮೀ ಹಿಂದ್ ನ ಬದ್ರುದ್ದೀನ್ ಮಲಾರ್, ಮಹಿಳಾ ವಿಭಾಗದ ಝೀನತ್ ಹಸನ್, ಹಫ್ಸಾ ಉಪಸ್ಥಿತರಿದ್ದರು.












