ಸನ್ಮಾರ್ಗ ವಾರ್ತೆ
ಕೇರಳ, ಫೆ. 15: ತಂದೆಯ ಕೊಲೆ ಆರೋಪಿಯ ಕುಟುಂಬಕ್ಕೆ ಮನೆ ಮತ್ತು ಜಾಗವನ್ನು ಕೊಲೆಯಾದವರ ಮಕ್ಕಳು ನೀಡಿದ ಅಪೂರ್ವ ಘಟನೆ ವೆಲಂಟೈನ್ ಡೇಯಂದು ನಡೆದಿದೆ. ತಲೆಯೋಲಪ್ಪರಂಬ್ ಹಣಕಾಸು ವ್ಯವಹಾರಸ್ಥ ಮ್ಯಾಥ್ಯುವಿನ ಕೊಲೆ ಆರೋಪಿ ಅನೀಶ್ ಎಂಬಾತನ ಕುಟುಂಬಕ್ಕೆ ಮ್ಯಾಥ್ಯೂವಿನ ಮಕ್ಕಳು, ಪತ್ನಿ ಐದು ಸೆಂಟ್ಸ್ ಜಾಗ ಮತ್ತು ಮನೆಯನ್ನು ನೀಡಿದರು. ಅರೋಪಿ ಅನೀಶ್ನ ತಂದೆ ವಾಸು ಇದನ್ನು ಕಣ್ಣೀರಿನೊಂದಿಗೆ ಸ್ವೀಕರಿಸಿದರು.
ತಲೆಯೋಲ ಪ್ಪರಂಭ್ ಸೇಂಟ್ ಜಾರ್ಜ್ ಚರ್ಚ್ನ ಪಾದ್ರಿ ವರ್ಗಿಸ್ ಚೆರಪ್ಪರಂಬಿಲ್, ಸಹ ಪಾದ್ರಿ ಜಿಂಟೊ ಪಡಯಾಟ್ಟಿಲ್ ಮುಂತಾದವರ ನೇತೃತ್ವದಲ್ಲಿ ಮನೆ ಹಸ್ತಾಂತರ ನಡೆಯಿತು. ಹಣಕಾಸು ವ್ಯವಹಾರಸ್ಥ ಮ್ಯಾಥ್ಯೂ ಮತ್ತು ಅನಿಷ್ ನಡುವೆ ನಡೆದ ಹಣಕಾಸು ವಿವಾದ ಮ್ಯಾಥ್ಯೂವಿನ ಕೊಲೆಯಲ್ಲಿ ಪರ್ಯಾವಸಾನಗೊಂಡಿತ್ತು. ಮ್ಯಾಥ್ಯೂವಿನಿಂದ ಪಡೆದುಕೊಂಡಿದ್ದ ಹಣವನ್ನು ಮರಳಿಸಲು ಅನಿಷ್ ಅಸಮರ್ಥನಾದಾಗ ಮ್ಯಾಥ್ಯೂ ಅನಿಷ್ನ ಐದು ಸೆಂಟ್ಸ್ ಸ್ಥಳ ಮತ್ತು ಮನೆಯನ್ನು ಅದಕ್ಕೆ ಬದಲಾಗಿ ಬರೆಸಿ ತೆಗೆದುಕೊಂಡಿದ್ದರು. ಇದು ನಂತರ ಮ್ಯಾಥ್ಯೂರ ಕೊಲೆಗೂ ಕಾರಣವಾಗಿತ್ತು. ಊರಿನಲ್ಲಿ ಮ್ಯಾಥ್ಯೂ ಕೊಲೆಯಾಗಿದ್ದಾರೆಂದು ಯಾರಿಗೂ ಗೊತ್ತಿರಲಿಲ್ಲ. ಅವರು ಊರು ಬಿಟ್ಟು ಹೋಗಿರಬಹುದು ಎಂದು ಎಲ್ಲರೂ ಹೇಳುತ್ತಿದ್ದರು. ಪೊಲೀಸರು ತನಿಖೆ ನಡೆಸಿದರೂ ಮ್ಯಾಥ್ಯೂ ಪತ್ತೆಯಾಗಿರಲಿಲ್ಲ. ಇದೇವೇಳೆ ಮ್ಯಾಥ್ಯೂ ಕೊಲೆಯಾದ ವಿವರವನ್ನು ಎಂಟು ವರ್ಷದ ಬಳಿಕ ಆರೋಪಿ ಅನಿಷ್ನ ತಂದೆ ವಾಸು ಬಹಿರಂಗಪಡಿಸಿದರು. ಈ ರೀತಿ ನಾಟಕೀಯವಾಗಿ ಮ್ಯಾಥ್ಯೂ ಕೊಲೆ ರಹಸ್ಯ ಬಯಲಾಯಿತು. ಮ್ಯಾಥ್ಯೂರ ಪುತ್ರಿ ನೈಸಿಗೆ ಮ್ಯಾಥ್ಯೂರನ್ನು ತನ್ನ ಮಗ ಕೊಲೆ ಮಾಡಿದ್ದಾನೆ ಎಂದು ವಾಸು ತಿಳಿಸಿದ್ದರು.
ಮಗ ಮಾಡಿದ ತಪ್ಪನ್ನು ಅಡಗಿಸಿಡದೆ ಸಮಾಜದ ಮುಂದೆ ತೆರೆದಿಟ್ಟ ವಾಸುಗೆ ಮ್ಯಾಥ್ಯೂ ಕುಟುಂಬದವರು ಮೆಚ್ಚುಗೆ ಸೂಚಿಸಿ ಮನೆ ಮತ್ತು ಜಾಗವನ್ನು ಪ್ರೀತಿಯಿಂದಲೇ ನೀಡಿದ್ದಾರೆ. ಎಂಟು ವರ್ಷದ ಹಿಂದೆ ಅನಿಷ್ ಮ್ಯಾಥ್ಯೂಗೆ ಬರೆದುಕೊಟ್ಟಿದ್ದ ಮನೆ ಮತ್ತು ಐದು ಸೆಂಟ್ಸ್ ಜಾಗವನ್ನು ಯಾವುದೇ ಹಣ ಪಡೆಯದೇ ಮ್ಯಾಥ್ಯೂ ಕುಟುಂಬ ಈಗ ಮರಳಿಸಿದೆ.












