ಸನ್ಮಾರ್ಗ ವಾರ್ತೆ
ಕುವೈಟ್ಸಿಟಿ, ಫೆ. 17: ದೇಶದಲ್ಲಿ ಅರವತ್ತು ವರ್ಷವನ್ನು ಮೀರಿದ ತಜ್ಞರಲ್ಲದ ಕಾರ್ಮಿಕರಿಗೆ ವಾಸ್ತವ್ಯ ದಾಖಲೆ ನವೀಕರಣವನ್ನು ಸ್ಥಗಿತಗೊಳಿಸಲು ಕುವೈಟ್ ಸರಕಾರ ನಿರ್ಧರಿಸಿದೆ. ವಿದೇಶಿ ಕಾರ್ಮಿಕರನ್ನು ಕಡಿಮೆ ಗೊಳಿಸುವುದು ಮತ್ತು ಜನಸಂಖ್ಯೆಯನ್ನು ಸಮತೋಲನಗೊಳಿಸುವುದು ಹೊಸ ನಿರ್ಧಾರದ ಉದ್ದೇಶವಾಗಿದ್ದು, ಆರ್ಟಿಕಲ್ 18 ವೀಸಾದ ಕಾರ್ಮಿಕರಿಗೆ ಇದು ಅನ್ವಯಿಸಲಿದೆ. ಉನ್ನತ ವಿದ್ಯಾರ್ಹತೆಯಿರುವವರಿಗೆ, ವೈದ್ಯರು, ಇಂಜಿನಿಯರ್, ಪತ್ರಕರ್ತರು, ಕಾನೂನು ತಜ್ಞರು, ಎಕ್ಸಿಕ್ಯೂಟಿವ್ ಡೈರಕ್ಟರ್, ಸ್ಪೆಶಲಿಸ್ಟ್ ಗಳು, ಖಾಸಗಿ ಸಂಸ್ಥೆಗಳ ವ್ಯಾಪಾರ ಪಾಲುದಾರರು, ಖಾಸಗಿ ಸಂಸ್ಥೆಗಳ ಬಿಸಿನೆಸ್ ಮುಖ್ಯಸ್ಥರು ಇವರಿಗೆಲ್ಲ ಈ ಕಾನೂನು ಅನ್ವಯಿಸುವುದಿಲ್ಲ. ಸಾಮಾನ್ಯ ಕಾರ್ಮಿಕರಿಗೆ ಮಾತ್ರ ಇದು ಅನ್ವಯವಾಗಲಿದೆ.
ಚಾಲಕರು ಮುಂತಾದ ಈ ಶ್ರೇಣಿಯವರಿಗೆ ಇದು ಅನ್ವಯವಾಗಲಿದೆ. ವಯಸ್ಸಾಗಿರುವವರಿಗಿಂತ ಯುವಕರಿದ್ದರೆ ಕಾರ್ಯಕ್ಷಮತೆ ಮತ್ತು ಕೆಲಸದ ಸಾಮರ್ಥ್ಯ ಹೆಚ್ಚುತ್ತದೆ, ಹೆಚ್ಚು ಯುವಕರಿಗೆ ಅವಕಾಶ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಮ್ಯಾನ್ಪವರ್ ಅಥಾರಿಟಿ ಈ ಸುಧಾರಣೆಗೆ ಮುಂದಾಗಿದೆ. ವಾಸ್ತವ್ಯ ದಾಖಲೆ ನವೀಕರಿಸುವ ಸಮಯದಲ್ಲಿ ಪದವಿ ಸರ್ಟಿಫಿಕೆಟ್, ಆರೋಗ್ಯ ಸಚಿವಾಲಯದ ಅಂಗೀಕಾರ ಸರ್ಟಿಫಿಕೆಟ್ಗಳನ್ನು ಹಾಜರು ಪಡಿಸಬೇಕಾಗಿಲ್ಲ. ವೈದ್ಯರ ಈ ಕೆಲಸವನ್ನು ಸಚಿವಾಲಯಕ್ಕೆ ಜೋಡಣೆಗೊಳಿಸಲಾಗಿದೆ. ಇದೇವೇಳೆ ನರ್ಸಿಂಗ್ ಉದ್ಯೋಗಿಗಳು ಶಿಕ್ಷಣಾರ್ಹತೆ, ವಿಶ್ವವಿದ್ಯಾನಿಲಯಗಳ ಪದವಿ ಸರ್ಟಿಫಿಕೆಟ್, ಡಿಪ್ಲೊಮಾ ಸರ್ಟಿಫಿಕೆಟ್ ಹಾಜರು ಪಡಿಸಬೇಕಾಗಿದೆ ಎಂದು ಅಲ್ ಸಿಯಾಸ್ ದೈನಿಕ ವರದಿಯಲ್ಲಿ ತಿಳಿಸಲಾಗಿದೆ.












