ಮೋದಿಯನ್ನು ಹೊಗಳಿದ ಜಸ್ಟಿಸ್ ಮಿಶ್ರರ ವರ್ತನೆ ನ್ಯಾಯಾಂಗಕ್ಕೆ ಅಪಮಾನ- ಬಾರ್ ಅಸೋಸಿಯೇಶನ್

0
501

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 27: ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಸುಪ್ರೀಂ ಕೋರ್ಟು ಜಡ್ಜ್ ಜಸ್ಟಿಸ್ ಅರುಣ್ ಮಿಶ್ರರ ವರ್ತನೆ ನ್ಯಾಯಾಂಗದ ನಿಷ್ಪಕ್ಷಪಾತಿತ್ವ, ಸ್ವತಂತ್ರ ಸ್ವಭಾವಕ್ಕೆ ಮಂಕು ಬಡಿಯುವಂತೆ ಮಾಡಿದೆ ಎಂದು ಬಾರ್ ಅಸೋಸಿಯೇಶನ್ ಇಂಡಿಯಾ ಹೇಳಿದೆ. ಸರಕಾರದ ವಿರುದ್ಧದ ಪ್ರಕರಣಗಳಲ್ಲಿ ಜನರ ವಿಶ್ವಾಸ ಹೋಗುವಂತೆ ಮಾಡುವ ಕ್ರಮಗಳು ಇವು ಎಂದು ಅಸೊಸಿಯೇಶನ್ ಅಧ್ಯಕ್ಷ ಲಲಿತ್ ಬಾಸಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರಕಾರದ ಅಧೀನದ ವ್ಯವಸ್ಥೆಯಿಂದ ದೂರ ಇರುವುದು ಮತ್ತು ಗೌರವಾನ್ವಿತ ದೂರವನ್ನು ಪಾಲಿಸುವುದು ನ್ಯಾಯಾಂಗದ ಮೂಲ ಹೊಣೆಗಾರಿಕೆಯಾಗಿದೆ ಎಂದವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಜ್ಯೂಡಿಶಿಯಲ್ ಕಾನ್ಫರೆನ್ಸಿನಲ್ಲಿ ಭಾಷಣ ನೀಡುವಾಗ ಜಸ್ಟಿಸ್ ಮಿಶ್ರ ಮೋದಿಯನ್ನು ಹೊಗಳಿದ್ದರು. ಇದರಲ್ಲಿ ಬಾರ್ ಎಸೊಸಿಯೇಶನ್ ತೀವ್ರ ಆತಂಕ ವ್ಯಕ್ತಪಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹುಮುಖ ಪ್ರತಿಭೆ, ದೂರದೃಷ್ಟಿಯಿರುವ ಅಂತಾರಾಷ್ಟ್ರೀಯ ನಾಯಕ ಎಂದು ಜಸ್ಟಿಸ್ ಮಿಶ್ರ ಹೇಳಿದ್ದರು. ಮೋದಿ ಜಾಗತಿಕವಾಗಿ ಚಿಂತಿಸುತ್ತಾರೆ. ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದರು. ಪ್ರಧಾನಿ ಮೋದಿ ಈ ಸಮ್ಮೇಳನವನ್ನು ಉದ್ಘಾಟಿಸಿದ್ದರು.