ದಿಟ್ಟ ಜಡ್ಜ್ ಲೋಯರ ನೆನಪಾಗುತ್ತಿದೆ- ರಾಹುಲ್ ಗಾಂಧಿ; ಜಿ. ಮುರಳೀಧರನ್‍ರ ವರ್ಗಾವಣೆ ನಾಚಿಕೆಗೇಡು- ಪ್ರಿಯಾಂಕ

0
783

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 27: ದಿಲ್ಲಿ ಗಲಭೆಗೆ ದಾರಿ ಮಾಡಿಕೊಟ್ಟ ದ್ವೇಷ ಭಾಷಣ ಮಾಡಿದ ನಾಲ್ವರು ಬಿಜೆಪಿ ನಾಯಕರ ವಿರುದ್ಧ ಕೇಸು ದಾಖಲಿಸಲು ಪೊಲೀಸರಿಗೆ ಸೂಚಿಸಿದ ದಿಲ್ಲಿ ಹೈಕೋಟು ಜಡ್ಜ್ ಮುರಳೀಧರನ್ ಅವರ ವರ್ಗಾವಣೆಯನ್ನು ಟೀಕಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟಿಸಿದ್ದಾರೆ. ವರ್ಗಾವಣೆಗೊಳಗಾದ ದಿಟ್ಟ ಜಡ್ಜ್ ಲೋಯರ ನೆನಪಾಗುತ್ತಿದೆ ಎಂದು ಒಂದೇ ವಾಕ್ಯದ ಟ್ವೀಟ್‍ನಲ್ಲಿ ರಾಹುಲ್ ಗಾಂಧಿ ಸರಕಾರವನ್ನು ಟೀಕಿಸಿದ್ದಾರೆ. ಅಮಿತ್ ಶಾ ಮೇಲೆ ಆರೋಪ ಇರುವ ಲೋಯರ ನಿಗೂಢ ಸಾವನ್ನು ಅವರು ಪುನಃ ಸ್ಮರಿಸುವಂತೆ ಮಾಡಿದ್ದಾರೆ.

ಇದೇ ವೇಳೆ ಜಸ್ಟಿಸ್ ಮುರಳೀಧರನ್ ವರ್ಗಾವಣೆ ದೇಶಕ್ಕೆ ನಾಚಿಕೆಗೇಡು ಎಂದು ಪ್ರಿಯಾಂಕಾ ಅಭಿಪ್ರಾಯ ವ್ಯಕ್ತಪಡಿಸಿದರು. ಜಸ್ಟಿಸ್ ಮುರಳೀಧರನ್ ಅವರನ್ನು ಮಧ್ಯರಾತ್ರೆಯಲ್ಲಿ ವರ್ಗಾವಣೆ ಮಾಡಿದ್ದು ಈಗಿನ ಪರಿಸ್ಥಿತಿಯಲ್ಲಿ ಆಶ್ಚರ್ಯ ತಂದಿಲ್ಲ. ಆದರೆ, ಇದು ದುಃಖ ಮತ್ತು ನಾಚಿಕೆಗೇಡಿನ ವಿಚಾರವಾಗಿದೆ. ಸತ್ಯಸಂಧ ನ್ಯಾಯ ವ್ಯವಸ್ಥೆಯ ಬಾಯಿಮುಚ್ಚಿಸಿ ಜನರ ನಂಬಿಕೆ ನಾಶವಾಗುವಂತೆ ಮಾಡುವ ಸರಕಾರದ ಕ್ರಮಗಳು ದುರದೃಷ್ಟಕರವಾಗಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು. ದಿಲ್ಲಿ ಹೈಕೋರ್ಟು ಜಡ್ಜ್ ಮುರಳೀಧರನ್‍ರನ್ನು ಪಂಜಾಬ್ ಹರಿಯಾಣ ಹೈಕೋರ್ಟಿಗೆ ವರ್ಗಾಯಿಸಲಾಗಿದೆ. ಬಿಜೆಪಿ ನಾಯಕರ ವಿರುದ್ಧ ಕೇಸು ದಾಖಲಿಸಲು ಅವರು ಪೊಲೀಸರಿಗೆ ಸೂಚಿಸಿದ್ದರು. ಅವರು 2006ರಿಂದ ದಿಲ್ಲಿ ಹೈಕೋರ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು.