ಒಂದು ಲಕ್ಷ ದಾಟಿದ ಕೊರೊನಾ ಪೀಡಿತರು: ಅಮೆರಿಕಕ್ಕೂ ವೈರಸ್ ಬಾಧೆ: ಸಂಪೂರ್ಣ ವರದಿ

0
1013

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಮಾ. 7: ಲೋಕದಾದ್ಯಂತ ಕೊರೊನಾ ವೈರಸ್ ದಾಂಧಲೆ ಮುಂದುವರಿದಿದ್ದು, ಈಗ ಒಂದು ಲಕ್ಷಕ್ಕೂಹೆಚ್ಚು ಮಂದಿ ಪೀಡಿತರಾಗಿದ್ದಾರೆ. ಇದರಲ್ಲಿ ಚೀನದ 80,651 ಮಂದಿಯೂ ಸೇರಿದ್ದಾರೆ. ಈಗ ಚೀನದಲ್ಲಿ 53,736 ಮಂದಿಯನ್ನು ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಕೊರೊನಾದಿಂದ ಜಾಗತಿಕ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದು ಶೇರು ಮಾರುಕಟ್ಟೆಯಲ್ಲಿ ಕುಸಿತವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾಂದ್ಯ ಕಂಡು ಬಂದಿದೆ. ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಕುಂದಿದೆ.

ಹೆಚ್ಚಿನ ದೇಶಗಳು ಕಂಪೆನಿ ಸಿಬ್ಬಂದಿಗಳನ್ನು ಮನೆಯಲ್ಲೇ ಕೂತು ಕೆಲಸ ಮಾಡಿ ಎಂದಿದೆಯಲ್ಲದೆ ಅವರಿಗೆ ಅದಕ್ಕೆ ಬೇಕಾದ ಸೌಕರ್ಯವನ್ನೂ ಮಾಡಿಕೊಟ್ಟಿದೆ. ವೈರಸ್ ಪೀಡಿತ ದೇಶಗಳಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳನ್ನೂ ಮುಚ್ಚಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳು, ಕ್ರೀಡಾಕೂಟ, ಸಂಗೀತ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಈಗ 90 ದೇಶಗಳಲ್ಲಿ ವೈರಸ್ ಕಂಡು ಬಂದಿದ್ದು ಸುಮಾರು 3400 ಮಂದಿ ಅದಕ್ಕೆ ಬಲಿಯಾಗಿದ್ದಾರೆ. ಶುಕ್ರವಾರ ಹೊಸದಾಗಿ ಏಳು ದೇಶಗಳಲ್ಲಿ ಕೊರೊನಾ ವರದಿಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಶೀಘ್ರ ಹರಡುವ ವೈರಸ್ ಇದು. ಹೊಸದಾಗಿ ಹನ್ನೆರಡಕ್ಕೂ ಹೆಚ್ಚು ಮಂದಿ ರೋಗಕ್ಕೆ ತುತ್ತಾಗಿದ್ದಾರೆಂದು ವರದಿಯಾಗಿದೆ. ಕ್ಯಾಲಿಫೋರ್ನಿಯದಲ್ಲಿ 3500 ಮಂದಿ ಹಡಗಿನಲ್ಲಿದ್ದಾರೆ. ಗ್ರಾಂಡ್ ಪ್ರಿನ್ಸ್ ಹಡಗಿನ 19 ಸಿಬ್ಬಂದಿ ಮತ್ತು ಇತರ ಇಬ್ಬರು ಕೊರೊನಾ ಪೀಡಿತರಾಗಿದ್ದಾರೆ. 46 ಮಂದಿಯ ಸ್ಯಾಂಪಲ್‍ಗಳನ್ನು ಪರೀಕ್ಷೆ ನಡೆಸಲು ಲ್ಯಾಬ್‍ಗೆ ಕಳುಹಿಸಿಕೊಡಲಾಗಿದೆ ಎಂದು ಅಮರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದರು. ಅಮೆರಿಕದಲ್ಲಿ ಅರ್ಧದಷ್ಟು ರಾಜ್ಯಗಳಲ್ಲಿ ಈಗಾಗಲೇ ಕೊರೊನಾ ದೃಢೀಕರಿಸಲ್ಪಟ್ಟಿದೆ. ಇಲ್ಲಿ 15 ಮಂದಿ ಮೃತಪಟ್ಟಿದ್ದಾರೆ. 250 ಮಂದಿಗೆ ರೋಗ ದೃಢೀಕರಣವಾಗಿದೆ.

ಇರಾನಿನಲ್ಲಿ 124 ಮಂದಿ ಬಲಿ

ಕೊರೊನಾದಿಂದ ಇರಾನಿನಲ್ಲಿ 124 ಮಂದಿ ಬಲಿಯಾಗಿದ್ದಾರೆ. 24 ಗಂಟೆಗಳಲ್ಲಿ ಸಾವಿರದಷ್ಟು ಮಂದಿಗೆ ಹೊಸದಾಗಿ ಇಲ್ಲಿ ಕೊರೊನಾ ವೈರಸ್ ವ್ಯಾಪಿಸಿದೆ ಎಂದು ವರದಿಯಾಗಿದೆ. ವ್ಯಾಟಿಕನ್‍ ನಲ್ಲಿ ಮೊದಲಬಾರಿ ಕೊರೊನಾ ವೈರಸ್ ಪೀಡಿತರು ಗುರುತಿಸಲ್ಪಟ್ಟಿದ್ದಾರೆ.

ಇಟಲಿಯಲ್ಲಿ ಸಾವಿನ ಸಂಖ್ಯೆ 197

ಯುರೋಪಿನ ದೇಶ ಇಟಲಿಯಲ್ಲಿ ಕೊರೊನಾದಿಂದ ಇದುವರೆಗೆ 197 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ವೈರಸ್ ತಗಲಿದವರಲ್ಲಿ ಶೇ. 3.4ರಷ್ಟು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕೊರಿಯದಲ್ಲಿ ಹೊಸದಾಗಿ 483 ಮಂದಿಗೆ ವೈರಸ್ ದೃಢೀಕರಣವಾಗಿದೆ. 2.5 ಮಿಲಿಯನ್ ಇರುವ ಡಯೊಗುವಿನಲ್ಲಿ ಅತೀಹೆಚ್ಚು ವೈರಸ್ ಹರಡಿದೆ.

ಇಂಗ್ಲೆಂಡಿನಲ್ಲಿ ಎರಡನೆ ಸಾವು

ಇಂಗ್ಲೆಂಡಿನಲ್ಲಿ ಕೊರೊನಾದಿಂದ ಇನ್ನೂ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು ಅಲ್ಲಿ ಇಬ್ಬರು ಕೊರನಾಕ್ಕೆ ಬಲಿಯಾಗಿದ್ದಾರೆಂದು ಅಲ್ಲಿನ ಚೀಫ್ ಮೆಡಿಕಲ್ ಅಧಿಕಾರಿ ಕ್ರಿಸ್ ವಿಟ್ಟಿ ತಿಳಿಸಿದರು.

ಚೀನದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ

ಕೊರೊನಾ ವೈರಸ್ ಮೊದಲು ಕಂಡು ಬಂದ ಚೀನದಲ್ಲಿ ಈಗ ಸಾವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಶುಕ್ರವಾರ 28 ಮಂದಿ ಮಾತ್ರ ಮೃತಪಟ್ಟಿದ್ದಾರೆ. ಹೊಸದಾಗಿ 99 ಮಂಂದಿಗೆ ಮಾತ್ರ ರೋಗ ದೃಢೀಕರವಾಗಿದೆ. ಗುರುವಾರ ಹೊಸದಾಗಿ 143 ಮಂದಿಗೆ ರೋಗ ತಗಲಿತ್ತು. ಚೀನದಲ್ಲಿ ಇದುವರೆಗೆ 80651 ಮಂದಿಯಲ್ಲಿ ರೋಗ ಕಂಡು ಬಂದಿದೆ. ಇದೇವೇಳೆ ರೋಗ ಬಾಧಿಸಿದ್ದ 53,736 ಮಂದಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಚೀನದ ಆರೋಗ್ಯ ಇಲಾಖೆ ತಿಳಿಸಿದೆ.