ಅಕ್ಟೋಬರ್ 7 ದಾಳಿಯ ಕುರಿತು ಸ್ವತಂತ್ರ ತನಿಖೆಗೆ ಇಸ್ರೇಲ್ ಸಂಸತ್ತಿನ ಬೆಂಬಲ; ನೆತನ್ಯಾಹುಗೆ ಹಿನ್ನಡೆ

0
5

ಸನ್ಮಾರ್ಗ ವಾರ್ತೆ

ಜೆರುಸಲೇಂ: ಹೊಸ ಸರ್ಕಾರ ರಚನೆಗೆ ನಿಯೋಜಿತರಾಗಿರುವ ವಿಪಕ್ಷ ನಾಯಕ ಗಾಡಿ ಐಸೆನ್‌ಕೋಟ್ ಅವರ ಮೈತ್ರಿಕೂಟಕ್ಕೆ ಅರಬ್ ಅಲ್ಪಸಂಖ್ಯಾತ ಪಕ್ಷಗಳು ಬೆಂಬಲ ನೀಡಿದ್ದು, ಪ್ರಾಥಮಿಕ ಮತದಾನದಲ್ಲಿ ತನಿಖಾ ಮಸೂದೆಗೆ ಅಂಗೀಕಾರ ದೊರೆತಿದೆ. ಮಸೂದೆಗೆ 50 ವಿರುದ್ಧ 65 ಮತಗಳು ದೊರೆತು ಅಂಗೀಕಾರಗೊಂಡಿತು.

ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಈ ಮಸೂದೆಯಲ್ಲಿ ಐವರು ಸದಸ್ಯರ ತನಿಖಾ ಆಯೋಗವನ್ನು ರಚಿಸಲು ಮತ್ತು 7 ಮಿಲಿಯನ್ ಶೆಕೆಲ್ (ಸುಮಾರು 2 ಮಿಲಿಯನ್ ಡಾಲರ್) ಬಜೆಟ್ ನಿಗದಿಪಡಿಸಲು ಪ್ರಸ್ತಾಪಿಸಲಾಗಿದ್ದು, ಆಯೋಗವು ಒಂದು ವರ್ಷದೊಳಗೆ ತನಿಖೆಯ ಮಧ್ಯಂತರ ವರದಿ ಸಲ್ಲಿಸಬೇಕಾಗುತ್ತದೆ. ಇದು ಕಾನೂನಾಗಲು ಸಂಸತ್ತಿನ ಸಮಿತಿಯ ಪರಿಶೀಲನೆ ಮತ್ತು ಇನ್ನೂ ಮೂರು ಸುತ್ತಿನ ಮತದಾನಗಳನ್ನು ಹಾದುಹೋಗಬೇಕಿದೆ.

ಅಕ್ಟೋಬರ್ 7 ರ ಭದ್ರತಾ ವೈಫಲ್ಯಗಳ ಕುರಿತು ವ್ಯಾಪಕ ಅಧಿಕಾರವಿರುವ ಸ್ವತಂತ್ರ ರಾಜ್ಯ ತನಿಖಾ ಆಯೋಗ ರಚಿಸುವುದನ್ನು ನೆತನ್ಯಾಹು ದೀರ್ಘಕಾಲದಿಂದ ವಿರೋಧಿಸುತ್ತಾ ಬಂದಿದ್ದಾರೆ. ಅವರು ರಾಜಕಾರಣಿಗಳಿಂದ ನೇಮಕಗೊಳ್ಳುವ ಸಮಿತಿಯ ಪರವಾಗಿದ್ದರು.

ಈ ಕುರಿತಂತೆ ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಿಯೋಜಿತ ಪ್ರಧಾನಿ ಅಭ್ಯರ್ಥಿ ಐಸೆನ್‌ಕೋಟ್, “ಮೃತಪಟ್ಟವರ ಕುಟುಂಬಗಳು ಮತ್ತು ಒತ್ತೆಯಾಳುಗಳಿಗಾಗಿ ನಾವು ಸತ್ಯವನ್ನು ಹೊರತರುತ್ತೇವೆ ಹಾಗೂ ಮುಂದಿನ ದುರಂತವನ್ನು ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ 27 ರಂದು ಇಸ್ರೇಲಿನ ಸಂಸತ್ತು ಕ್ನೆಸೆಟ್‌ಗೆ ನಡೆದಿದ್ದ ಚುನಾವಣೆಯಲ್ಲಿ 120 ಸದಸ್ಯರ ಸಂಸತ್ತಿನಲ್ಲಿ ಬೆಂಜಮಿನ್ ನೆತನ್ಯಾಹು ಅವರ ತೀವ್ರ ಬಲಪಂಥೀಯ ಮೈತ್ರಿಕೂಟ 53 ಸ್ಥಾನಗಳಿಗೆ ಕುಸಿದಿತ್ತು. ಐಸೆನ್‌ಕೋಟ್ ನೇತೃತ್ವದ ವಿಪಕ್ಷ ಮೈತ್ರಿಕೂಟ 48 ಸ್ಥಾನಗಳನ್ನು ಹೊಂದಿದ್ದು, 19 ಸ್ಥಾನಗಳನ್ನು ಗೆದ್ದಿರುವ ಅರಬ್ ಪಕ್ಷಗಳು ಶಾಸಕಾಂಗ ಮತದಾನಗಳಲ್ಲಿ ವಿಪಕ್ಷದ ಪರ ನಿಂತಿರುವುದು ನೆತನ್ಯಾಹು ಅವರಿಗೆ ದೊಡ್ಡ ಹಿನ್ನಡೆಯಾಗಿದೆ.

ಹೊಸ ಸರ್ಕಾರ ರಚಿಸಲು ಐಸೆನ್‌ಕೋಟ್ ಅವರಿಗೆ ಡಿಸೆಂಬರ್ 6 ರವರೆಗೆ ಕಾಲಾವಕಾಶ ನೀಡಲಾಗಿದೆ (ಅಗತ್ಯವಿದ್ದರೆ 14 ದಿನಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ). ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನೆತನ್ಯಾಹು ಅವರಿಗೆ ಮತ್ತೊಂದು ಅವಕಾಶ ಸಿಗಬಹುದು; ಅದೂ ವಿಫಲವಾದರೆ ಇಸ್ರೇಲ್ ಮತ್ತೊಂದು ಚುನಾವಣೆಯತ್ತ ಸಾಗಲಿದೆ.

2023ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಗಾಝಾದಲ್ಲಿ ಇಸ್ರೇಲ್ ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ 74,000 ಕ್ಕೂ ಹೆಚ್ಚು ಫೆಲೆಸ್ತೀನಿಯರು ಸಾವನ್ನಪ್ಪಿದ್ದು, ಸುಮಾರು 20 ಲಕ್ಷ (2 ಮಿಲಿಯನ್) ಜನರು ನಿರಾಶ್ರಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.