ಕ್ಷೇತ್ರ ಪುನರ್ವಿಂಗಡಣೆ ಚರ್ಚೆ: ಸಂಸತ್ತಿನ ಕಲಾಪಕ್ಕೂ ಮುನ್ನ ಎನ್‌ಸಿಪಿ-ಶರದ್ ಪವಾರ್‌ರಿಂದ ವಿಪ್ ಜಾರಿ

0
7

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಂಸತ್ತಿನ ವಿಶೇಷ ಕಲಾಪಕ್ಕೂ ಮುನ್ನ ನವೆಂಬರ್ 30ರಿಂದ ಲೋಕಸಭೆ ಕಲಾಪ ಪುನರಾರಂಭವಾಗುವ ಹಿನ್ನೆಲೆಯಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್‌ಸಿಪಿ ಶರದ್ ಪವಾರ್ ಬಣವು ತನ್ನ ಎಲ್ಲಾ ಎಂಟು ಲೋಕಸಭಾ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ. “ಅತ್ಯಂತ ಮಹತ್ವದ ಕಲಾಪ” ಇರುವುದರಿಂದ ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಿದ್ದು ಪಕ್ಷದ ನಿಲುವನ್ನು ಬೆಂಬಲಿಸುವಂತೆ ವಿಪ್‌ನಲ್ಲಿ ಸೂಚಿಸಲಾಗಿದೆ.

ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸದೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಅಂಗೀಕರಿಸಬಾರದು ಎಂಬ ಷರತ್ತನ್ನು ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಒತ್ತಿ ಹೇಳಿದ್ದಾರೆ.

ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಸಮರ್ಪಕ ಆಡಳಿತ ಮತ್ತು ಅಭಿವೃದ್ಧಿಗಾಗಿ ಕ್ಷೇತ್ರಗಳ ಗಾತ್ರ ಕಡಿಮೆ ಮಾಡುವ ಅಥವಾ ಸೀಟುಗಳ ಸಂಖ್ಯೆ ಹೆಚ್ಚಿಸುವ ಅಗತ್ಯವನ್ನು ಅವರು ಪ್ರಸ್ತಾಪಿಸಿದ್ದಾರೆ.

ಇದೇ ವೇಳೆ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ವಿಷಯಾಧಾರಿತ ನಿಲುವು ತೆಗೆದುಕೊಳ್ಳುವ ಸುಳಿವು ನೀಡಿದರೂ, ಎನ್‌ಡಿಎ ಸೇರುವ ಅಥವಾ ಪ್ರತಿಸ್ಪರ್ಧಿ ಅಜಿತ್ ಪವಾರ್ ಎನ್‌ಸಿಪಿ ಬಣದೊಂದಿಗೆ ವಿಲೀನವಾಗುವ ವದಂತಿಗಳನ್ನು ಸುಪ್ರಿಯಾ ಸುಳೆ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.