ಸನ್ಮಾರ್ಗ ವಾರ್ತೆ
ಲಕ್ನೋ; ಮಾ. 9- ಸಿಎಎ ವಿರೋಧಿ ಹೋರಾಟಗಾರರ ಭಾವಚಿತ್ರ ಇರುವ ಹೋರ್ಡಿಂಗ್ ಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಉತ್ತರಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಚಾಟಿ ಬೀಸಿದ್ದು, ಮಾರ್ಚ್ 16 ರ ಒಳಗೆ ಎಲ್ಲ ಹೋರ್ಡಿಂಗ್ ಗಳನ್ನು ತೆರವುಗೊಳಿಸಬೇಕು ಎಂದು ಲಕ್ನೋ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೈಕೋರ್ಟ್ ನ ಈ ಆದೇಶವು ತೀವ್ರ ಮುಖಭಂಗವೆಂದು ರಾಜಕೀಯ ವಲಯದಲ್ಲಿ ಚರ್ಚೆಗಳಾಗುತ್ತಿವೆ.
ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್ ಮತ್ತು ನ್ಯಾಯಮೂರ್ತಿ ರಮೇಶ್ ಸಿನ್ಹ ಅವರಿದ್ದ ವಿಭಾಗೀಯ ಪೀಠವು, ಆರೋಪಿಗಳ ಭಾವಚಿತ್ರ ಇರುವ ಹೋರ್ಡಿಂಗ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೇತುಹಾಕಿದ್ದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊ೦ಡಿತ್ತು. ಸರಕಾರದ ಕ್ರಮವನ್ನು ಜನರ ಖಾಸಗಿ ಬದುಕಿನಲ್ಲಿ ಅನಗತ್ಯ ಮಧ್ಯಪ್ರವೇಶ ಎಂದು ನ್ಯಾಯಪೀಠವು ವ್ಯಾಖ್ಯಾನಿಸಿರುವುದು ಗಮನಾರ್ಹವಾಗಿದೆ.
ಇಂತಹ ಹೋರ್ಡಿಂಗ್ ಗಳು ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸುತ್ತವೆ. ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣಬೇಕಿದ್ದ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದ್ದ ಸರಕಾರಿ ಸಂಸ್ಥೆಗಳು ಹಾಗೆ ನಡೆದುಕೊಂಡಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ.
ಸಂವಿಧಾನದ 21ನೇ ವಿಧಿಯ ಆಶಯವನ್ನು ನ್ಯಾಯಾಲಯಗಳು ಖಾಸಗಿತನದ ಪರವಾಗಿ ವ್ಯಾಖ್ಯಾನಿಸಿವೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಯಾವುದೇ ಮೌಲ್ಯದ ಬಗ್ಗೆ ಅಗೌರವ ತೋರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಪ್ರಕರಣದ ಬಗ್ಗೆ ರಜಾದಿನವಾಗಿದ್ದ ರವಿವಾರದಂದು ವಿಚಾರಣೆ ನಡೆಸಿದ ನ್ಯಾಯಾಲಯವು ಉತ್ತರಪ್ರದೇಶ ಸರಕಾರದ ಕ್ರಮವು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ವ್ಯಾಖ್ಯಾನಿಸಿತ್ತಲ್ಲದೇ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು.
ಲಕ್ನೋ ಆಡಳಿತವು ಅಳವಡಿಸಿದ್ದ ಹೋರ್ಡಿಂಗ್ ಗಳಲ್ಲಿ ಕಾಂಗ್ರೆಸ್ ನಾಯಕ ಸದಾಫ್ ಜಾಫರ್, ರಿಹಾಯ್ ಮಂಚ್ ನ ಸ್ಥಾಪಕ ಮುಹಮ್ಮದ್ ಶೋಯೆಬ್, ಶಿಯಾ ಸಮುದಾಯದ ಧಾರ್ಮಿಕ ಮುಖಂಡ ಕಲ್ಬೆ ಸಾಧಿಕ್ ಅವರ ಪುತ್ರ ಕಲ್ಬೆ ನೂರಿ, ನಿವೃತ್ತ ಐಪಿಎಸ್ ಅಧಿಕಾರಿ ದಾರಪುರಿ ಅವರ ಹೆಸರು, ಚಿತ್ರ ಮತ್ತು ವಿವರಗಳಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯವಾಗಿ ತೀವ್ರ ವಾದ, ಚರ್ಚೆ, ಟೀಕೆಗಳಿಗೆ ಕಾರಣವಾಗಿತ್ತು.












