ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 26: ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದಿನಗೂಲಿಯವರ ಕಷ್ಟಕ್ಕೆ ದಿಲ್ಲಿಯ ಒಂದು ಕುಟುಂಬ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕೂಲಿ ಕೆಲಸದ ಬಂಟಿ ಮತ್ತು ಅವರ ಕುಟುಂಬವು ದೆಹಲಿಗಿಂತ 150 ಕಿಲೊಮೀಟರ್ ದೂರದ ಅಲಿಗಡದ ನಿವಾಸಿಗಳಾಗಿದ್ದಾರೆ. ಪತ್ನಿ, ಮೂವರು ಮಕ್ಕಳು ಸಮೇತ ಒಂದು ದೊಡ್ಡ ಗಂಟಿನೊಂದಿಗೆ ನಡೆದುಕೊಂಡು ಈ ಕುಟುಂಬ ವಲಸೆ ಹೋಗುತ್ತಿತ್ತು. ಅವರನ್ನು ಎನ್ಡಿಟಿವಿ ಮಾತಾಡಿಸಿದಾಗ ಕುಟುಂಬ ತನ್ನ ನೋವನ್ನು ಬಿಚ್ಚಿಟ್ಟಿತು.
ಜೀವಿಸಲಿಕ್ಕಾಗಿ ದೇಶದ ರಾಜಧಾನಿಗೆ ಬಂದಿದ್ದೆವು. ಆದರೆ ಕೊರೊನಾ ಲಾಕ್ ಡೌನ್ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ನಾವು ಇಲ್ಲಿದ್ದು ಏನು ಮಾಡುವುದು… ಏನು ತಿನ್ನುವುದು? , ಕಲ್ಲು ತಿಂದು ಮನುಷ್ಯನಿಗೆ ಬದುಕಲು ಆಗುತ್ತದೆಯೇ ಎಂದು ದೊಡ್ಡ ಕಟ್ಟನ್ನು ಹೊತ್ತುಕೊಂಡು ಬಂಟಿಯ ಹಿಂದೆ ಹಿಂದೆ ನಡೆಯುತ್ತಿದ್ದ ಆತನ ಪತ್ನಿ ಎನ್ಡಿಟಿವಿ ಪತ್ರಕರ್ತನನ್ನು ಪ್ರಶ್ನಿಸಿದರು.
ದಿಲ್ಲಿಯಲ್ಲಿ ಯಾರು ಯಾರಿಗೂ ನೆರವಾಗುತ್ತಿಲ್ಲ. ಅಲ್ಲಿನ ಗ್ರಾಮಗಳೇ ಹಾಗೆ ಇವೆ. ನನ್ನ ಗ್ರಾಮದಲ್ಲಿ ರೊಟ್ಟಿ ಚಟ್ಟಿ ತಿಂದು ಸಮಾಧಾನದಿಂದ ಬದುಕಬಹುದು. ಆದರೆ ಇಲ್ಲಿ, ನಮಗೆ ಏನೂ ಇಲ್ಲ. ನಮಗೆ ಸಹಾಯ ಮಾಡುವವರು ಯಾರೂ ಇಲ್ಲ ಎಂದು ಮಗನನ್ನು ತೋಳಲ್ಲೆತ್ತಿಕೊಂಡಿದ್ದ ಬಂಟಿ ಹೇಳಿದರು.
ದಿಲ್ಲಿಯಿಂದ 150 ಕಿಲೊಮೀಟರ್ ದೂರದ ಬಂಟಿಯ ಗ್ರಾಮಕ್ಕೆ ಪತ್ನಿ ಮಕ್ಕಳೊಂದಿಗೆ ಹೋಗಿ ಸೇರಲು ಕನಿಷ್ಠ ಎರಡು ದಿವಸವಾದರೂ ಬೇಕು. ಅಗತ್ಯಕ್ಕೆ ಹಣವೋ ಆಹಾರವೋ ಅವರ ಕೈಯಲ್ಲಿಲ್ಲ. ಲಾಕ್ ಡೌನ್ ಘೋಷಿಸುವುದರೊಂದಿಗೆ ಬಸ್ಗಳು, ರೈಲುಗಳು ದಿಲ್ಲಿಯಲ್ಲಿ ಆಚೀಚೆ ಓಡಾಡದೆ ನಿಂತು ಬಿಟ್ಟಿವೆ. ಆದ್ದರಿಂದ ಉತ್ತರ ಪ್ರದೇಶದ ತನ್ನ ಹುಟ್ಟೂರಿಗೆ ಬಂಟಿ ನಡೆದುಕೊಂಡು ತಲುಪಬೇಕು. ಗಡಿ ಮತ್ತು ಇತರ ಕಡೆಗಳಲ್ಲಿ ಕಠಿಣ ತಪಾಸಣೆ ಬೇರೆ ಇದೆ. ಜೀವನೋಪಾಯ ಇಲ್ಲದೆ 150 ಕಿಲೊ ಮೀಟರ್ ದೂರದ ಊರಿಗೆ ದಿನಗೂಲಿ ಬಂಟಿ ಮತ್ತು ಕುಟುಂಬ ನಡೆದುಕೊಂಡೇ ಹೋಗಬೇಕಾಗಿದೆ. ಕೊರೊನಾದ ಕರಾಳ ಛಾಯೆ ಇದು.












