ಮನೆ ಬಾಗಿಲಿಗೆ ದಿನಬಳಕೆಯ ಸಾಮಗ್ರಿಗಳು: ಮಂಗಳೂರು ಮಹಾ ನಗರ ಪಾಲಿಕೆಯಿಂದ ಕ್ರಮ

0
641

ಸನ್ಮಾರ್ಗ ವಾರ್ತೆ

ಮಂಗಳೂರು, ಮಾ.30: ದ.ಕ. ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಇರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಪೊರೇಟರ್‌ಗಳ ಮೇಲುಸ್ತುವಾರಿಯಲ್ಲಿ ದಿನಬಳಕೆಯ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ನಾಳೆ- ಮಾ. 31ರಿಂದ- ಈ ವ್ಯವಸ್ಥೆ ಆರಂಭಗೊಳ್ಳಲಿದೆ. ಪಾಲಿಕೆ ವ್ಯಾಪ್ತಿಯ ಜಿನಸಿ ಅಂಗಡಿಗಳನ್ನು ಈಗಾಗಲೇ ಗುರುತಿಸಲಾಗಿದೆ. ವಾರ್ಡ್‌ವಾರು ಅಂಗಡಿಗಳ ಹೆಸರು, ಮೊಬೈಲ್ ನಂಬರ್ ಪ್ರಕಟಿಸಲಾಗಿದೆ. ಕಾರ್ಪೊರೇಟರ್‌ಗಳಿಗೆ ಅವರ ವಾರ್ಡ್‌ನ ಪಟ್ಟಿ ಒದಗಿಸಲಾಗಿದೆ. ಬೇಡಿಕೆಯ ಮೇರೆಗೆ ಅವರು ಜಿನಸು ಪೂರೈಸಲು ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮೂಡಾ ಆಯುಕ್ತರಿಗೆ ರೇಶನ್ ಕಿಟ್‌ಗಳನ್ನು ಸಿದ್ಧಗೊಳಿಸಲು ತಿಳಿಸಲಾಗಿದೆ. ಅದರಂತೆ, ಅಕ್ಕಿ, ಬೇಳೆ, ಸಕ್ಕರೆ, ಚಹಾಪುಡಿ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ 5000 ಕಿಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಯಾವ ರೀತಿಯಲ್ಲಿ ವಿತರಣೆ ಮಾಡಬೇಕೆಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಅಂಗಡಿಗಳಿಗೆ ಹೋಂ ಡೆಲಿವರಿಗೆ ಪಾಸ್‌ಗಳನ್ನು ನೀಡಲಾಗಿದೆ. ಜನರು ತಮಗೆ ಬೇಕಾದ ಅಂಗಡಿಗಳಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಹೋಂ ಡೆಲಿವರಿ ಪಡೆಯಬಹುದು. ಮಂಗಳವಾರ ಬೆಳಗ್ಗೆಯಿಂದ ಸಂಜೆ 3ಗಂಟೆಯವರೆಗೆ ಅಂಗಡಿಗಳಲ್ಲಿ ದಿನ ಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದೆ ಎಂದು ಪಾಲಿಕೆ ಅವರು ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.