ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 16: ಇಲ್ಲಿ ಸಿಕ್ಕಿಹಾಕಿಕೊಂಡ ಕಾರ್ಮಿಕರ ಪರಿಸ್ಥಿತಿ ಲಾಕ್ ಡೌನ್ ಮುಂದುವರಿದಿರುವುದರಿಂದ ಮತ್ತಷ್ಟು ಕಠಿಣವಾಗಿದೆ. ಹಲವರಿಗೆ ಸಂಘಟನೆಗಳವರು ಕೊಡುವ ಒಂದು ಹೊತ್ತಿನ ಊಟದಲ್ಲಿ ಜೀವ ಉಳಿಸಿಕೊಂಡಿದ್ದಾರೆ. ದಿಲ್ಲಿಯ ಯಮುನಾ ನದಿಯ ತಟದಲ್ಲಿ ಇರುವ ಕಾರ್ಮಿಕರು ಶ್ಮಶಾನದದಲ್ಲಿ ರಾಶಿಹಾಕಿದ ಬಾಳೆಹಣ್ಣಗಳನ್ನು ಹೆಕ್ಕಿ ತಿನ್ನುತ್ತಿರುವ ಕರುಳು ಚುರ್ ಎನ್ನುವ ದೃಶ್ಯಗಳು ಬಯಲಾಗಿವೆ.
ರಾಶಿಹಾಕಿದ ಬಾಳೆ ಹಣ್ಣಿನಲ್ಲಿ ಕೊಳೆತು ಹೋಗದಿರುವುದನ್ನು ಇವರು ಹೆಕ್ಕುತ್ತಾರೆ. ಬಾಳೆ ಹಣ್ಣು ಬೇಗನೆ ಹಾಳಾಗುವುದಿಲ್ಲ. ಆದ್ದರಿಂದ ಒಂದೆರಡು ದಿವಸ ಅದನ್ನು ಇಟ್ಟು ತಿನ್ನಬಹುದು. ಹೀಗೂ ಜೀವ ಉಳಿಸಿಕೊಳ್ಳಬಹುದು ಎಂದು ಅವರು ಹೇಳುತ್ತಿದ್ದಾರೆ.
ದಿಲ್ಲಿಯ ಪ್ರಧಾನ ಶ್ಮಶಾನ ನಿಗಂಬೊದ್ ಘಾಟ್ನಲ್ಲಿ ಅಂತಿಮ ಸಂಸ್ಕಾರ ಮುಗಿದು ಎಸೆದುಹೋದ ಬಾಳೆ ಹಣ್ಣುಗಳನ್ನು ವಲಸೆ ಕಾರ್ಮಿಕರು ಹೆಕ್ಕಿ ತಿನ್ನುತ್ತಿದ್ದಾರೆ.
“ನಮಗೆ ಸರಿಯಾಗಿ ಆಹಾರ ಸಿಗುವುದಿಲ್ಲ. ಆದ್ದರಿಂದ ಹಣ್ಣನ್ನು ಹೆಕ್ಕಿ ತಿನ್ನುತ್ತಿದ್ದೇವೆ” ಎಂದು ಅಲಗರ್ ನ ಕಾರ್ಮಿಕರೊಬ್ಬರು ಹೇಳಿದರು . ಲಾಕ್ ಡೌನ್ ಆದ ಬಳಿಕ ಕೆಲಸವೂ ಇಲ್ಲ. ಇಂತಹ ನೂರಾರು ಕಾರ್ಮಿಕರು ಉತ್ತರ ದಿಲ್ಲಿಯ ಯಮುನಾ ನದಿ ತೀರದಲ್ಲಿ ಸೇತುವೆ ಕೆಳಗೆ ಉಳಿದುಕೊಂಡಿದ್ದಾರೆ. ಅವರಿಗೆ ಗುರುದ್ವಾರದಿಂದ ಒಂದು ಹೊತ್ತಿನ ಆಹಾರ ಸಿಗುತ್ತಿದೆ. ಇದು ಅವರು ಜೀವ ಉಳಿಸಿಕೊಳ್ಳಲು ಈವರೆಗೆ ಸಹಾಯಕವಾಗಿದೆ.
ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಸ್ಥಳ, ಊಟ ಕೊಡಬೇಕು ಎಂದು ಕೇಂದ್ರ ಸರಕಾರದ ಸೂಚನೆ ಇದೆ. ಆದರೆ ಮುಂಬಯಿ, ದಿಲ್ಲಿಯಲ್ಲಿ ವಲಸೆ ಕಾರ್ಮಿಕರು ಖಾಲಿ ಜಾಗದಲ್ಲಿ ಉಳಿದುಕೊಂಡಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












