ಉನ್ನತ ಶಿಕ್ಷಣದ ಕುರಿತು SIO, GIO ವತಿಯಿಂದ ವಿಚಾರ ಸಂಕಿರಣ

0
6

ಸನ್ಮಾರ್ಗ ವಾರ್ತೆ

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (SIO) ಮತ್ತು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ವತಿಯಿಂದ ನವೆಂಬರ್ 28ರಂದು ನಗರದ ಬಂದರ್‌ನ ಹಿದಾಯತ್ ಸೆಂಟರ್‌ನಲ್ಲಿ ಉನ್ನತ ಶಿಕ್ಷಣದ ಕುರಿತು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ SIO ಮತ್ತು GIO ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

SIO ಕರ್ನಾಟಕದ ರಾಜ್ಯ ಸಲಹಾ ಸಮಿತಿ ಸದಸ್ಯ ಅಡ್ವಕೇಟ್ ಝಮೀರ್ ಕೆ. ಅವರು ಉದ್ಘಾಟನಾ ಭಾಷಣ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿಯ ಹಳೆಯ ವಿದ್ಯಾರ್ಥಿನಿ ಲದೀದಾ ಫರ್ಝಾನಾ ಅವರು ಕೇಂದ್ರ ವಿಶ್ವವಿದ್ಯಾಲಯಗಳ ಮಹತ್ವದ ಕುರಿತು ಮಾತನಾಡಿದರು. ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡ ಅವರು, ವಿದ್ಯಾರ್ಥಿಗಳು ತಮ್ಮ ಗುರುತು, ಜವಾಬ್ದಾರಿ ಮತ್ತು ಪ್ರಾತಿನಿಧ್ಯದ ಮಹತ್ವವನ್ನು ಅರಿತುಕೊಳ್ಳುವುದರ ಜೊತೆಗೆ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿರುವ ಉನ್ನತ ಶಿಕ್ಷಣದ ಅವಕಾಶಗಳನ್ನು ಬಳಸಿಕೊಳ್ಳುವಂತೆ ಪ್ರೇರೇಪಿಸಿದರು.

ಬಳಿಕ SIO ಮಂಗಳೂರು ಮಾಜಿ ನಗರಾಧ್ಯಕ್ಷ ಮಿರ್ ಮುಬಶ್ಶಿರ್ ಝಹೂರ್ ಅವರು ತಾಂತ್ರಿಕ ಪ್ರಸ್ತುತಿ ನಡೆಸಿ, ಪಿಯುಸಿ ಮತ್ತು ಪದವಿ ಶಿಕ್ಷಣದ ನಂತರದ ಉನ್ನತ ಶಿಕ್ಷಣದ ಆಯ್ಕೆಗಳು, ಶೈಕ್ಷಣಿಕ ಅವಕಾಶಗಳು ಹಾಗೂ ವಿದ್ಯಾರ್ಥಿವೇತನಗಳ ಕುರಿತು ಮಾಹಿತಿ ನೀಡಿದರು.

GIO ದಕ್ಷಿಣ ಕನ್ನಡ ಜಿಲ್ಲಾ ಸಂಘಟಕಿ ಝಿನೇರಾ ಹುಸೇನ್ ಉಪಸ್ಥಿತರಿದ್ದರು. ಕೊನೆಯಲ್ಲಿ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.