ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 24: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ, ಪತ್ನಿ ಹಾಗೂ ಚ್ಯಾನೆಲ್ ಎಡಿಟರ್ ಸಮ್ಯಪ್ರದ ರಾಯಿ ಮೇಲೆ ದಾಳಿ ನಡೆದಿದ್ದು ಇದರ ಹಿಂದೆ ಸೋನಿಯಾ ಗಾಂಧಿ ಇದ್ದಾರೆ ಎಂದು ಅರ್ನಾಬ್ ಆರೋಪಿಸಿದ್ದಾರೆ. ಚ್ಯಾನೆಲ್ನಲ್ಲಿ ಕೆಲಸ ಮುಗಿಸಿ ಕಾರಿನಲ್ಲಿ ಹೋಗುವಾಗ ದಾರಿಯಲ್ಲಿ ಬುಧವಾರ ಮಧ್ಯ ರಾತ್ರೆ 12.15ಕ್ಕೆ ದಾಳಿ ನಡೆಯಿತು. ಮುಂಬೈ ಎನ್ಎಂ ಜೋಷಿ ಮಾರ್ಗ ಮಾರ್ಗ ಪೊಲೀಸ್ ಠಾಣೆಯಲ್ಲಿ ಅರ್ನಾಬ್ ಗೋಸ್ವಾಮಿ ದೂರು ನೀಡಿದ್ದಾರೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಕಾರು ಗಣಪತ್ ರಾವ್ ಕದಂ ರಸ್ತೆಗೆ ಬಂದಾಗ ಬೈಕಿನಲ್ಲಿ ಬಂದ ಇಬ್ಬರು ಕಾರು ತಡೆದು ಆಶ್ಲೀಲ ಸಂಜ್ಞೆ ಮಾಡಿದರು. ಅವಾಚ್ಯ ನಿಂದನೆ ಮಾಡಿದರು. ಕಾರಿಗೆ ಬಲವಾಗಿ ಗುದ್ದಿದರು ಎಂದು ದೂರಿನಲ್ಲಿ ಅರ್ನಾಬ್ ಹೇಳಿದ್ದಾರೆ. ದುಷ್ಕರ್ಮಿಗಳಿಂದ ಪಾರಾಗಿ ಐವತ್ತು ಮೀಟರ್ ದೂರ ಬಂದಾಗ ದುಷ್ಕರ್ಮಿಗಳು ಮುಂಬೈ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದು ನೋಡಿದೆ ಎಂದು ದೂರಿನಲ್ಲಿ ಅರ್ನಾಬ್ ಹೇಳಿದ್ದಾರೆ. ದಾಳಿ ನಡೆದು ಎರಡೂ ಮುಕ್ಕಾಲು ಗಂಟೆಯಲ್ಲಿ ಯುವ ಕಾಂಗ್ರೆಸ್ ಝಿಂದಾಬಾದ್ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬರ ಅಧಿಕೃತ ಟ್ವಿಟರ್ ನಲ್ಲಿ ಟ್ವೀಟ್ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಿಕಟವಾಗಿರುವ ಕಾಂಗ್ರೆಸ್ ನಾಯಕರು ದಾಳಿಗೆ ಸಂಚು ಹೆಣೆದಿದ್ದಾರೆ ಮತ್ತು ಅಲ್ಕಾ ಲಾಂಬರ ಟ್ವೀಟನ್ನೂ ಅರ್ನಾಬ್ ದೂರಿನಲ್ಲಿ ವಿವರಿಸಿದ್ದಾರೆ.
ಪಾಲ್ಗರ್ ನಲ್ಲಿ ಹಿಂದೂ ಸನ್ಯಾಸಿಗಳ ವಿರುದ್ಧ ನಡೆದ ದಾಳಿಯಲ್ಲಿ ಮತ್ತು ಹಲವು ಘಟನೆಗಳಲ್ಲಿ ಸೋನಿಯಾ ಗಾಂಧಿ ಮೌನವಹಿಸಿದ್ದಾರೆ. ಅದನ್ನು ಪ್ರಶ್ನಿಸಿದ್ದು ದಾಳಿಗೆ ಕಾರಣವೆಂದು ಅವರು ಆರೋಪಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












