ಸನ್ಮಾರ್ಗ ವಾರ್ತೆ
ಅಬ್ದುಸ್ಸಲಾಮ್ ದೇರಳಕಟ್ಟೆ
ಪವಿತ್ರ ರಂಝಾನ್ ತಿಂಗಳಿಗೆ ಇಸ್ಲಾಮಿನಲ್ಲಿ ವಿಶೇಷ ಸ್ಥಾನವಿದೆ. ಅದು ಉಪವಾಸ ವ್ರತ ಅನುಷ್ಠಾಣಗೊಳಿಸುವ ತಿಂಗಳು ಎಂಬುದಕ್ಕಿಂತಲೂ ಆ ತಿಂಗಳು ಪಾಪವಿಮೋಚನೆಯ, ದಾನ ಧರ್ಮಕ್ಕೆ ಹತ್ತು ಪಟ್ಟು ಪುಣ್ಯ ಸಿಗುವ ಮತ್ತು ಪವಿತ್ರ ಕುರ್ ಆನ್ ಅವತೀರ್ಣಗೊಂಡ ತಿಂಗಳು ಎಂಬ ಕಾರಣಕ್ಕಾಗಿ ಕೂಡ ಆಗಿದೆ. ಈ ತಿಂಗಳನ್ನು ಮುಸ್ಲಿಂ ಸಮುದಾಯವು ಅತಿ ಹೆಚ್ಚು ಗೌರವಿಸಲ್ಪಡುವುದೇಕೆಂದರೆ ಮಾನವನಿಗೆ ಸಾದ್ಯಂತ ಸನ್ಮಾರ್ಗದರ್ಶನ ಮತ್ತು ಭೂಮ್ಯಾಕಾಶಗಳ ದೃಷ್ಟಾಂತಗಳನ್ನು ಪವಿತ್ರ ಕುರ್ ಆನಿನೊಂದಿಗೆ ಅವತೀರ್ಣಗೊಳಿಸಿದ ತಿಂಗಳು ಎಂಬ ಕಾರಣಕ್ಕಾಗಿಯೂ ಆಗಿದೆ. ಪವಿತ್ರ ಕುರ್ ಆನ್ ಮಾತ್ರವಲ್ಲ ಅದಕ್ಕಿಂತ ಹಿಂದಿನ ಗ್ರಂಥಗಳು ಕೂಡ ಅವತೀರ್ಣಗೊಂಡಿರುವುದು ರಮಝಾನ್ ತಿಂಗಳಿನಲ್ಲೇ ಎಂಬ ಪರಂಪರೆ ಕೂಡ ಇದೆ. ಪ್ರವಾದಿ (ಸ ) ಹೇಳಿದ್ದಾಗಿ ಅಬೂದರ್ರ್ (ರ) ರಿಂದ ವರದಿಯಾದ ಪ್ರವಾದಿ ವಚನವೊಂದು ಈ ರೀತಿ ಇದೆ, ರಮಝಾನ್ ಮೂರರಂದು ಇಬ್ರಾಹೀಮ್(ಅ) ರವರಿಗೆ ಗ್ರಂಥ ನೀಡಲ್ಪಟ್ಟವು. ರಮಝಾನ್ ಆರರಂದು ಪ್ರವಾದಿ ಮೂಸಾ (ಅ)ರವರಿಗೆ ತೌರಾತ್ ನೀಡಲ್ಪಟ್ಟಿತು. ಪ್ರವಾದಿ ಈಸಾ (ಅ)ರವರಿಗೆ ಇಂಜೀಲ್ ಅಥವಾ ಬೈಬಲ್ ಅವತೀರ್ಣಗೊಂಡಿರುವುದು ರಮಝಾನ್ ಹದಿಮೂರಕ್ಕೆ, ದಾವೂದ್ (ಅ)ರವರಿಗೆ ಝಬೂರ್ ನೀಡಿರುವುದು ರಮಝಾನ್ ಹದಿನೆಂಟಕ್ಕೆ ಮತ್ತು ರಮಝಾನ್ ಇಪ್ಪತ್ತೇಳಕ್ಕೆ ಅಂತ್ಯ ಪ್ರವಾದಿ ಮುಹಮ್ಮದ್ (ಸ) ರವರಿಗೆ ಪವಿತ್ರ ಕುರ್ ಆನ್ ಅವತೀರ್ಣಗೊಂಡಿತು. (ಅಹ್ಮದ್, ಬೈಹಕಿ, ತ್ವಬ್ರಾನಿ)
ರಂಝಾನ್ ತಿಂಗಳಲ್ಲಿ ಆಚರಿಸುವ ಉಪವಾಸ ವ್ರತ ಅಲ್ಲಾಹನ ಈ ಅನುಗ್ರಹಕ್ಕಿರುವ ಕೃತಜ್ಞತೆಯಾಗಿದೆ. ವ್ರತಾನುಷ್ಠಾನದಿಂದ ಮಾತ್ರ ಅದು ಪೂರ್ಣವಾಗದು. ಬದಲಾಗಿ ಕಡ್ಡಾಯ ಝಕಾತ್, ದಾನ ದರ್ಮ, ಆತ್ಮ ಸಂಸ್ಕರಣೆಯನ್ನು ಕೂಡ ಮಾಡುವುದರ ಮೂಲಕ ಅಲ್ಲಾಹನು ನಿರ್ದೇಶಿಸಿದ ಸರಿಯಾದ ಮಾರ್ಗದೊಂದಿಗೆ ಬದುಕನ್ನು ರೂಪಿಸಿದರೆ ಮಾತ್ರ ಅಲ್ಲಾಹನ ಸಂಪ್ರೀತಿಯನ್ನು ಗಳಿಸಬಹುದು.
ರಮಝಾನ್ ತಿಂಗಳು ಮಾನವಕುಲಕ್ಕೆ ಅತ್ಯದ್ಭುತವಾಗಿದೆ. ಈ ಮಾತಿನಲ್ಲಿ ಅಲಂಕಾರಿಕತೆಯಿಲ್ಲ.ವಾಸ್ತವದಲ್ಲಿ ಈ ಅಲಂಕಾರ ಎಂಬ ಪದವನ್ನು ಇಲ್ಲಿ ಬಳಸಲು ಕಾರಣವಿದೆ.ಅದರ ಉದಾಹರಣೆ ಹೀಗಿದೆ. ಒಬ್ಬ ವ್ಯಕ್ತಿ ತನ್ನ ದುರ್ನಡತೆಯಿಂದ ಮುಕ್ತಿ ಪಡೆದು ಜೀವನವನ್ನು ಸಂಸ್ಕರಿಸಲು ತೀರ್ಮಾನಿಸುತ್ತಾನೆ. ಆದರೆ ಅದು ಒಂದು ತಿಂಗಳಲ್ಲಿ ಸಾಧ್ಯವೇ? ಖಂಡಿತ ಸಾಧ್ಯವಲ್ಲ. ಏಕೆಂದರೆ ಅವನು ಜೀವಿಸುವ ಪರಿಸರ, ಅವನ ಸ್ನೇಹಿತ ವೃಂದ, ಮತ್ತು ಅವನು ಅಳವಡಿಸಿಕೊಂಡಂತಹ ಚಟ ಇವೆಲ್ಲವನ್ನೂ ಬಿಟ್ಟು ಓರ್ವ ಉತ್ತಮ ವ್ಯಕ್ತಿಯಾಗಿ ಮಾರ್ಪಾಟು ಹೊಂದಲು ಸಾಧಾರಣ ಗತಿಯಲ್ಲಿ ಸಾಧ್ಯವಾಗದ ಮಾತು.ಅವನು ಕೆಡುಕಿನಿಂದ ತನ್ನನ್ನು ಒಳಿತೆನೆಡೆಗೆ ಕೊಂಡೊಯ್ಯಲು ಪ್ರಯತ್ನಿಸುವಾಗಲೆಲ್ಲಾ ಅವನ ಮನಸ್ಸು ಅವನನ್ನು ಕೆಡುಕಿನೆಡೆಗೆ ಸೆಳೆಯುತ್ತಿರುತ್ತದೆ. ಒಬ್ಬ ಧೂಮಪಾನ ಮಾಡುವ ವ್ಯಕ್ತಿ ಆ ಚಟವನ್ನು ಬಿಡಲು ಸರ್ವ ಪ್ರಯತ್ನವನ್ನೂ ಮಾಡುತ್ತಿರುತ್ತಾನೆ. ಆದರೆ ರಮಝಾನ್ ತಿಂಗಳಲ್ಲಿ ಅವನು ಅದರಿಂದ ದೂರ ಸರಿಯುತ್ತಾನೆ. ರಮಝಾನ್ ಮುಗಿದೊಡನೆ ಪುನಃ ಅದಕ್ಕೆ ಮರಳುತ್ತಾನೆ.
ಇಲ್ಲಿ ರಮಝಾನ್ ತಿಂಗಳ ಒಂದನೆಯ ಅದ್ಭುತವನ್ನು ನಮಗೆ ಕಾಣಲು ಸಾಧ್ಯ. ನಿಮ್ಮೆಲ್ಲ ಕೆಟ್ಟ ಚಟಗಳನ್ನು ಬಿಟ್ಟು ಹೊಸ ಒಬ್ಬ ಮನುಷ್ಯನಾಗಿ ರೂಪಾಂತರಗೊಳ್ಳಲು ಸಾಧ್ಯವೇ? ರಮಝಾನ್ ನಲ್ಲಿ ಅದು ಸಾಧ್ಯ. ರಮಝಾನ್ ನಲ್ಲಿ ಮಾತ್ರವೇ ಅದು ಸಾಧ್ಯವಾಗುತ್ತದೆ. ಏಕೆಂದರೆ ಆ ತಿಂಗಳನ್ನು ಅಲ್ಲಾಹನು ಆ ರೀತಿಯಲ್ಲಿ ವ್ಯವಸ್ಥಿತಗೊಳಿಸಿದ್ದಾನೆ. ರಮಝಾನ್ ತಿಂಗಳಲ್ಲಿ ಪಿಶಾಚಿಯನ್ನು ಬಂಧಿಸಲ್ಪಡುತ್ತದೆ ಎಂದು ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ.ಮನುಷ್ಯನನ್ನು ಕೆಡುಕಿನೆಡೆಗೆ ಒಯ್ಯಲು ಪಿಶಾಚಿಯು ತನ್ನೆಲ್ಲಾ ಪ್ರಯತ್ನವನ್ನೂ ನಿರಂತರವಾಗಿ ಮಾಡುತ್ತಿರುತ್ತಾನೆ.
ರಮಝಾನ್ ತಿಂಗಳಲ್ಲಿ ನೀವು ನಿಮ್ಮನ್ನು ಸಂಸ್ಕರಿಸಲು ಸನ್ನದ್ಧರಾಗಿದ್ದೀರಾ? ಹೌದು ಎಂದಾದರೆ ಇಲ್ಲಿ ನಿಮಗೆ ಅವಕಾಶವಿದೆ. ಬೇರೆ ಯಾವ ತಿಂಗಳಿನಲ್ಲೂ ನಿಮಗೆ ಅದು ಸಾಧ್ಯವಿಲ್ಲ ಮತ್ತು ಇದು ನಿಮಗೊಂದು ಸುವರ್ಣಾವಕಾಶ. ರಮಝಾನ್ ನಿಮ್ಮೊಂದಿಗೆ ಸಹಕರಿಸಲು ಸಿದ್ಧವಿದೆ. ಆದರೆ ನೀವು ಅದನ್ನು ಯಾವ ರೀತಿ ಉಪಯೋಗಿಸುವಿರಿ ಎಂಬುದನ್ನು ಹೊಂದಿಕೊಂಡಿವೆ. ಯಾವುದೇ ವಸ್ತುವನ್ನು ನಾವು ಪರಿಗಣಿಸುವುದು ಅದರ ಬೆಲೆಯನ್ನು ನೋಡಿಯೇ ಆಗಿರುತ್ತೆ ಎಂಬುದರಲ್ಲಿ ಎರಡು ಮಾತಿಲ್ಲ. ರಮಝಾನ್ ತಿಂಗಳನ್ನು ನಾವು ಗೌರವಿಸಬೇಕಾದರೆ ಮತ್ತು ಅದು ನಮ್ಮಲ್ಲಿ ಪರಿಗಣಿತವಾಗಬೇಕಾದರೆ ನಾವು ಅದನ್ನು ಸಮೀಪಿಸುವ ರೀತಿ ಮತ್ತು ನಾವು ಅರ್ಥಮಾಡಿಕೊಂಡಿರುವ ರೀತಿಗೆ ಹೊಂದಿಕೊಂಡಿವೆ. ನಮಗಿಂತ ಹಿಂದೆ ಒಂದು ಮನುಷ್ಯ ರಾಶಿಯು ಕಳೆದು ಹೋಗಿದ್ದಾರೆ. ಅವರು ರಮಝಾನ್ ತಿಂಗಳನ್ನು ಅರ್ಥೈಸಿದ್ದರು. ಆದ್ದರಿಂದಲೇ ಅವರು ಈ ತಿಂಗಳನ್ನು ಸ್ವಾಗತಿಸಿದ ರೀತಿ ನಮ್ಮನ್ನು ಆಶ್ಚರ್ಯ ಗೊಳಿಸುತ್ತದೆ. ಏಕೆಂದರೆ,
ಪ್ರವಾದಿ (ಸ) ಈ ಭೂಮಿಯನ್ನು ಪ್ರಯಾಣದ ಮಧ್ಯೆ ಇರುವ ಒಂದು ವಿಶ್ರಾಂತಿ ತಾಣಕ್ಕೆ ಹೋಲಿಸಿದ್ದರು. ಪ್ರವಾದಿ (ಸ) ಹೇಳಿದರು,ನಾನು ಮತ್ತು ಇಹಲೋಕಕ್ಕೆ ಯಾವುದೇ ಸಂಬಂಧವಿಲ್ಲ. ಹಾಗೇನಾದರೂ ಒಂದು ಸಂಬಂಧವಿದ್ದರೆ ಅದು ಕೇವಲ ಓರ್ವ ಯಾತ್ರಿಕ ಮತ್ತು ಮರದ ನೆರಳಿನ ಸಂಬಂಧ ಮಾತ್ರ. ಯಾತ್ರಿಕನು ತಾನು ದೀರ್ಘ ಪ್ರಯಾಣ ಮಾಡಿ ಸುಸ್ತಾದಾಗ ವಿಶ್ರಾಂತಿಗಾಗಿ ಮರದ ನೆರಳಲ್ಲಿ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯುತ್ತಾನೆ. ಅವನು ಪೂರ್ಣ ಸ್ಥಿತಿಗೆ ತಲುಪಿದಾಗ ಆ ಮರವನ್ನು ಬಿಟ್ಟು ಮುಂದೆ ಸಾಗುತ್ತಾನೆ. ಇಹಲೋಕಕ್ಕೆ ಇಷ್ಟೇ ಪ್ರಾಮುಖ್ಯವನ್ನು ಪ್ರವಾದಿಯರು ನೀಡಿದ್ದರು. ಆದರೆ, ಪ್ರವಾದಿಯವರು ತನ್ನ ಆಯುಷ್ಯವನ್ನು ಹೆಚ್ಚಿಸಲು ಪ್ರಾರ್ಥಿಸುತ್ತಿದ್ದರು ಕೂಡ. ರಮಝಾನ್ ಹತ್ತಿರ ಬರುವಾಗ ತನಗೆ ಈ ತಿಂಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಆಯುಷ್ಯವನ್ನು ಹೆಚ್ಚಿಸುವಂತೆ ಪ್ರಾರ್ಥಿಸುತ್ತಿದ್ದರು. ರಮಝಾನಿನ ಮಹತ್ವ ಮತ್ತು ಆಳವನ್ನು ಅರಿಯಲು ಇನ್ನೇನು ಬೇಕು?
ಆದರೆ ಈ ತಿಂಗಳಲ್ಲಿ ಮನುಷ್ಯನು ಸಂಸ್ಕರಿಸಲ್ಪಡುವುದು ಹೇಗೆ? ರಮಝಾನಿನ ಚೈತನ್ಯ ಅವನಲ್ಲಿ ರೂಪುಗೊಂಡಿದೆಯೇ ಅಥವಾ ಅದು ಕೇವಲ ಸಾಂಪ್ರಾದಾಯಿಕ ಕ್ರಿಯೆಗೆ ಮಾತ್ರ ಸೀಮಿತವಾಗಿದೆಯೇ? ಇದಕ್ಕೆ ಉತ್ತರ ಕಂಡುಕೊಳ್ಳ ಬೇಕಾಗಿರುವುದು ಬಹಳ ಅನಿವಾರ್ಯವಾಗಿದೆ. ಮನುಷ್ಯನನ್ನು ದುರ್ಬಲನನ್ನಾಗಿ ಮತ್ತು ದುಡುಕು ಸ್ವಭಾವದವನನ್ನಾಗಿ ಸೃಷ್ಟಿಸಲಾಗಿದೆ (ಕುರ್ ಆನ್ 21:37, 4:28).
ಹೌದು ಮನುಷ್ಯನು ಅತ್ಯಂತ ದುರ್ಬಲನೂ ದುಡುಕು ಸ್ವಾಭಾವಿಯೂ ಆಗಿದ್ದಾನೆ. ಆದ್ದರಿಂದಲೇ ಅವನು ಕೆಡುಕಿನ ಕಡೆಗೆ ಸೆಳೆಯಲ್ಪಡುತ್ತಾನೆ. ಅವನ ಸ್ವಾರ್ಥ ಮತ್ತು ಸ್ವೇಚ್ಛೆ ಒಳಿತಿನಿಂದ ದೂರ ಸರಿಯುವಂತೆ ಮಾಡುತ್ತದೆ. ಹಣ ಮತ್ತು ಸಂಪತ್ತು ಮನುಷ್ಯನನ್ನು ಸ್ವಾರ್ಥದ ಕಡೆಗೆ ಕೊಂಡೊಯ್ಯುತ್ತದೆ. ತಾನು ಮತ್ತು ತನ್ನ ಕುಟುಂಬ ಎಂಬುದರಲ್ಲಿ ಅವನ ಸಂಬಂಧ ಸಂಕುಚಿತಗೊಂಡು, ಸಂಪಾದನೆಯ ವಿಷಯದಲ್ಲಿ ಇಡೀ ಲೋಕವೇ ತನ್ನದಾಗಬೇಕೆಂಬ ಅತಿ ಆಶೆ ಮನುಷ್ಯನನ್ನು ಒಳಿತಿನಿಂದ ದೂರ ಸರಿಯುವಂತೆ ಮಾಡುತ್ತದೆ. ಆದರೆ ಓರ್ವ ಸತ್ಯವಿಶ್ವಾಸಿಯ ಮಟ್ಟಿಗೆ ರಮಝಾನ್ ತಿಂಗಳು ಪಾಪವಿಮೋಚನೆಯ, ಕಾರುಣ್ಯದ, ಸಹಾನುಭೂತಿಯ ಮತ್ತು ಹೃದಯ ವೈಶಾಲ್ಯತೆಯ ತಿಂಗಳಾಗಿ ಮಾರ್ಪಾಟುಹೊಂದುತ್ತದೆ. ಅವನ ಮಟ್ಟಿಗೆ ಪುಣ್ಯವೇರಿದ ಒಂದು ತಿಂಗಳು ವರದಾನವಾಗಿದೆ. ಮತ್ತು ಅವನು ಅಲ್ಲಾಹನಲ್ಲಿ ಭರವಸೆಯನ್ನೂ ಹೊಂದಿರುತ್ತಾನೆ. ಓರ್ವ ಸತ್ಯವಿಶ್ವಾಸಿಯ ಮಟ್ಟಿಗೆ ಯಥೇಷ್ಟವಾಗಿ ಪುಣ್ಯಗಳನ್ನು ಸಂಗ್ರಹಿಸಲು ಸೂಕ್ತ ಸಮಯ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಭುವಿನ ಕ್ಷಮೆಯ ಕಡೆಗೆ ಮತ್ತು ಭೂಮಿ ಆಕಾಶಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ಧಾವಿಸಿರಿ (3:133) ಎಂಬ ಕಲ್ಪನೆಯನ್ನು ಪಾಲಿಸಿ ಅವನ ತಪ್ಪನ್ನು ಸರ್ವಶಕ್ತನಲ್ಲಿ ಮುಚ್ಚು ಮರೆಯಿಲ್ಲದೆ ಮನ್ನಿಸಲು ಅಪೇಕ್ಷಿಸುತ್ತಾನೆ.
ಆದರೆ,
ದುರದೃಷ್ಟವಶಾತ್ ನಮ್ಮ ಇಂದಿನ ರಮಝಾನ್ ನಲ್ಲಿ ಚೈತನ್ಯವಿದೆಯೇ ? ಅದು ಕೇವಲ ಒಂದು ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತ ಎಂದು ತೋರುವುದಿಲ್ಲವೇ? ವರ್ಷದಲ್ಲೊಂದು ತಿಂಗಳು ರಮಝಾನ್ ತಿಂಗಳನ್ನು ನಾವು ಬಹಳ ಸಂತೋಷದಿಂದಲೂ ಪೂರ್ವ ತಯಾರಿಯಿಂದಲೂ ಸ್ವಾಗತಿಸುತ್ತೇವೆ,ಉಪವಾಸ ಆಚರಿಸುತ್ತೇವೆ, ದಿನ ರಾತ್ರಿ ನಮಾಜ್ ಮತ್ತು ಆರಾಧನಾ ಕರ್ಮಗಳಲ್ಲಿ ತಲ್ಲೀನರಾಗುತ್ತೇವೆ. ಸಾಧ್ಯವಿರುವ ಪ್ರಕಾರ ದಾನ ಧರ್ಮ ಮಾಡುತ್ತೇವೆ ಮತ್ತು ಬಿಳ್ಕೊಡುತ್ತೇವೆ.ಇದು ನಾವು ಹಿಂದಿನಿಂದಲೂ ಕೈಗೊಂಡು ಬಂದಿರುವ ರೂಢಿ. ಇದರಾಚೆಗೆ ಈ ತಿಂಗಳು ನಮ್ಮಲ್ಲೆಷ್ಟು ಪ್ರಭಾವ ಬೀರಿದೆ.
ಕಳೆದ ವರ್ಷ ನಮ್ಮೊಂದಿಗೆ ಉಪವಾಸ ಅನುಷ್ಠಿಸಿದ್ದ, ನಮ್ಮೊಂದಿಗೆ ಹೆಗಲಿಗೆ ಹೆಗಲು ತಾಗಿಸಿ ನಮಾಜ್ ಮಾಡಿದ್ದ ಮತ್ತು ನಮ್ಮೊಂದಿಗೆ ಹರಟೆ ಹೊಡೆಯುತ್ತಿದ್ದ ನಮ್ಮ ಸಂಬ೦ಧಿಕರು ಅಥವಾ ಸ್ನೇಹಿತರು ಇಂದು ನಮ್ಮನ್ನಗಲಿದ್ದಾರೆ.ನಾವೀಗ ಮರಣದ ಸಾರಥಿ ಸಾಲಿನಲ್ಲಿ ನಿಂತಿದ್ದೇವೆ. ಆದುದರಿಂದ ನಮ್ಮ ದಿನನಿತ್ಯದ ಪ್ರತಿಯೊಂದು ನಿಮಿಷವೂ ಮಹತ್ವಪೂರ್ಣವಾಗಿದೆ. ಇಹಲೋಕದ ಮನೋರಂಜನೆಗೆ ಮತ್ತು ಸುಖಲೋಲುಪತೆಗೆ ಮಾರು ಹೋಗಿ ಪರಲೋಕವನ್ನು ಮರೆತು ಬಿಡುವವನು ನಿಜವಾಗಿಯೂ ನಷ್ಟದಲ್ಲಿದ್ದಾನೆ. ಹೌದು ಮನುಷ್ಯನು ಮಹಾ ನಷ್ಟದಲ್ಲಿದ್ದಾನೆ.(ಕುರ್ ಆನ್ 103:2)
ಆದುದರಿಂದ ನಮ್ಮ ಬದುಕನ್ನೊಮ್ಮೆ ಅವಲೋನಕ್ಕೆ ಒಡ್ಡಬೇಕಿದೆ. ಸವೆದ ಹೆಜ್ಜೆಗಳು, ಕಳೆದು ಹೋದ ಬದುಕು, ವ್ಯಯಿಸಿದ ಸಂಪತ್ತು, ಆಡಿದ ಮಾತು ಮತ್ತು ಕೃತಿ ಹೀಗೆ ಪಟ್ಟಿ ಬೆಳೆಯುತ್ತಲೇ ಭೂಮಿಯಲ್ಲಿ ನಮ್ಮ ಪ್ರಯಾಣವನ್ನು ಸ್ಮರಿಸುವಾಗ ಪರಲೋಕದ ಅತ್ಯಂತ ವಿಶಾಲವಾದ, ಶಾಶ್ವತವಾದ ಮತ್ತು ಸುಂದರವಾದ ಸ್ವರ್ಗಕ್ಕೆ ನಮ್ಮನ್ನು ಕರೆಯುವ ಸೃಷ್ಟಿಕರ್ತನ ಆಜ್ಞೆಯನ್ನು ಪಾಲಿಸಲು ನಾವೆಷ್ಟು ಸಿದ್ಧರಾಗಿದ್ದೇವೆಂಬ ಜಿಜ್ಞಾಸೆ ನಮ್ಮಲ್ಲಿ ರೂಪುಗೊಳ್ಳಬೇಕಾಗಿದೆ.
ನಾವು ಹನ್ನೊಂದು ತಿಂಗಳು ದುಡಿದಿದ್ದೇವೆ.ಮೋಜು ಮಸ್ತಿಗಳನ್ನು ಮಾಡಿದ್ದೇವೆ.ಆಡಿದ್ದೇವೆ, ಕುಣಿದಿದ್ದೇವೆ, ಸುತ್ತಾಡಿದ್ದೇವೆ, ಅಪಹಾಸ್ಯ ಮಾಡಿದ್ದೇವೆ, ಸಿಟ್ಟಿನಿಂದ ಜಗಳಗಂಟನಾಗಿದ್ದೆವೆ, ಬಡ್ಡಿಯ ವ್ಯವಹಾರ ನಡೆಸಿದ್ದೇವೆ, ವ್ಯವಹಾರದಲ್ಲಿ ಇತರರ ಹಕ್ಕನ್ನು ಕಸಿದಿದ್ದೇವೆ, ಸುಳ್ಳು ಮೋಸ ವಂಚನೆಯಲ್ಲಿ ಯಾವುದೇ ಮುಲಾಜಿಲ್ಲದೆ ತೊಡಗಿಸಿಕೊಂಡಿದ್ದೇವೆ,ಸಂಪತ್ತಿಗಾಗಿ ಅವಿರತ ಪರಿಶ್ರಮ ಪಟ್ಟಿದ್ದೇವೆ,ಕುಟುಂಬ ಸಂಬಧವನ್ನು ಕೆಡಿಸಿದ್ದೇವೆ. ಇತತರನ್ನು ಗೇಲಿ ಮಾಡಿದ್ದೇವೆ ಮತ್ತು ಗೇಲಿಗೊಳಗಾಗಿದ್ದೇವೆ, ಆದರೆ ಈ ತಿಂಗಳು ಅವೆಲ್ಲವನ್ನೂ ಅಳಿಸಿ ಹಾಕಲು ಸೂಕ್ತ ಸಮಯವಾದ ಕಾರಣ ನಮ್ಮ ಆಲೋಚನೆ, ನಮ್ಮ ಒಡನಾಟ, ನಮ್ಮ ನಡತೆ, ನಮ್ಮ ಮಾತು ಕೃತಿ, ನಮ್ಮ ಚಿಂತೆ, ಇವೆಲ್ಲವನ್ನೂ ನಮ್ಮನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ಅಲ್ಲಾಹನ ಆದೇಶಕ್ಕೆ ಒಳಪಡಿಸಬೇಕಿದೆ.
ಸಾಂಪ್ರದಾಯಿಕತೆಯ ಆಚರಣೆ ಅಲ್ಲಾಹನಿಗೆ ಬೇಕಾಗಿಲ್ಲ. ಇಂದು ನಮ್ಮ ವ್ರತಾಚರಣೆಗಳು ಆಡಂಭರದತ್ತ ಸಾಗಿದೆ, ಗ್ರ್ಯಾಂಡ್ ಇಫ್ತಾರ್ ಮೀಟ್, ಇಫ್ತಾರ್ ಗೆಟ್ ಟುಗೆದರ್, ರಮಝಾನ್ ಫೀಸ್ಟಾ ಎಂಬ ಏನೇನೋ ಹೆಸರಿನಿಂದ ಆರಂಭಗೊಂಡು ಫುಡ್ ಫೆಸ್ಟಿವಲ್ ನಂತಹ ವಿವಿಧ ಖಾದ್ಯ ಮತ್ತು ವರ್ಣರಂಜಿತ ಆಹಾರ ಪದಾರ್ಥಗಳ ಪ್ರದರ್ಶನವಾಗಿಬಿಟ್ಟಿವೆ ಮತ್ತು ರಮಝಾನಿನ ಆರಂಭದಲ್ಲೇ ಬಟ್ಟೆ ಬರೆಗಳ ಖರೀದಿಯಲ್ಲೇ ದಿನಗಳೆಯುತ್ತೇವೆ. ಅದಕ್ಕೆ ಹೊರತಾಗಿ ಅಲ್ಲಾಹನಿಗೆ ತನ್ನನ್ನು ಸಮರ್ಪಿಸುವ, ಅಲ್ಲಾಹನೊಂದಿಗೆ ಸಂಬಂಧ ಬೆಳೆಸುವ, ಅಲ್ಲಾಹನ ದಾಸರ ಹಕ್ಕನ್ನು ಪೂರೈಸುವ, ಭೂಮಿಯ ಹಕ್ಕನ್ನು ತೀರಿಸುವ ಹೀಗೆ ನಾನಾ ವಿಧದ ಜವಾಬ್ದಾರಿಯನ್ನು ನಿಭಾಯಿಸುವ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಮನುಷ್ಯನಾಗುವ ರೀತಿಯಲ್ಲಿ ನಮ್ಮ ಉಪವಾಸ ವ್ರತ ಆಗಬೇಕಿದೆ ಮತ್ತು ಅದರೊಂದಿಗೆ ಆ ರೀತಿಯಲ್ಲಿ ವ್ಯವಹರಿಸಬೇಕಿದೆ. ಈ ತಿಂಗಳು ಹೊಟ್ಟೆಯ ಹಕ್ಕನ್ನು ತೀರಿಸುವುದಕ್ಕಿಂತ ಮಿಗಿಲಾಗಿ ಆತ್ಮದ ಹಕ್ಕನ್ನು ನೆರವೇರಿಸಬೇಕಿದೆ. ಅರ್ಥಾತ್ ಹೊಟ್ಟೆಗೆ ಮಿತವಾದುದನ್ನೇ ನೀಡಿ ಆತ್ಮವನ್ನು ಸಂತೃಪ್ತಿಗೊಳಿಸುವಲ್ಲಿ ನಮ್ಮ ಆಲೋಚನೆಗಳು ಮತ್ತು ನಮ್ಮ ಪ್ರತಿಯೊಂದು ಚಲನವಲನಗಳು ಆ ನಿಟ್ಟಿನಲ್ಲಿ ಸಾಗಬೇಕಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












