ಸನ್ಮಾರ್ಗ ವಾರ್ತೆ
ಬೆಂಗಳೂರು ಎಪ್ರಿಲ್ 25- ಬಜರಂಗದಳದ ಮಾಜಿ ಸಂಚಾಲಕ, ಖ್ಯಾತ ವಾಗ್ಮಿ ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದ ಮಹೇಂದ್ರ ಕುಮಾರ್ ಅವರು ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಶನಿವಾರ ಬೆಳಗಾತ 5:00 ಗಂಟೆಗೆ ಅವರು ನಿಧನರಾಗಿರುವುದನ್ನು ಘೋಷಿಸಲಾಗಿದೆ.
ಚಿಕ್ಕಮಗಳೂರಿನ ಕೊಪ್ಪ ಎಂಬಲ್ಲಿ ಹುಟ್ಟಿ ಆ ಬಳಿಕ ಸಂಘಪರಿವಾರದಲ್ಲಿ ಹಂತಹಂತವಾಗಿ ಬೆಳೆದು ಬಜರಂಗದಳದ ರಾಜ್ಯ ಸಂಚಾಲಕರಾಗ ನೇಮಕವಾಗಿ 2008ರ ಚರ್ಚ್ ದಾಳಿಗೆ ನೇತೃತ್ವ ನೀಡಿ ರಾಜ್ಯಮಟ್ಟದಲ್ಲಿ ಸುದ್ದಿಗೆ ಒಳಗಾಗಿದ್ದರು. 2008 ಸೆಪ್ಟೆಂಬರ್ 14ರಂದು ಮಂಗಳೂರಿನಲ್ಲಿ ಈ ದಾಳಿ ನಡೆದಿತ್ತು ಮತ್ತು ಆ ಕಾರಣಕ್ಕಾಗಿ ಅವರು ಬಂಧನಕ್ಕೊಳಗಾಗಿದ್ದರು.
ಆದರೆ 2008 ಅಕ್ಟೋಬರ್ 1ರಂದು ಮಹೇಂದ್ರಕುಮಾರ್ ಅವರು ಬಜರಂಗದಳಕ್ಕೆ ರಾಜೀನಾಮೆ ನೀಡಿ 2011 ಫೆಬ್ರವರಿಯಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಸೇರಿಕೊಂಡಿದ್ದರು.
ಬಜರಂಗದಳದಿಂದ ಹೊರಬಂದ ಬಳಿಕ ಸಂಘಪರಿವಾರ ಮತ್ತು ಬಿಜೆಪಿಯ ಕಟು ಟೀಕಾಕಾರರಾಗಿ ಬದಲಾದವರು. ಸಂಘಪರಿವಾರದಲ್ಲಿ ತನಗಾದ ಅನುಭವಗಳನ್ನು ಮತ್ತು ಸಂಘಪರಿವಾರ ಪಾಲಿಸಿಕೊಂಡು ಬರುತ್ತಿರುವ ಅಸ್ಪೃಶ್ಯ ನೀತಿಯನ್ನು ಬಹಿರಂಗ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಉಲ್ಲೇಖಿಸಿದ್ದರು ಮತ್ತು ಸಂಘಪರಿವಾರದ ಜೊತೆ ಸೇರಬೇಡಿ ಎಂದು ಯುವಸಮೂಹಕ್ಕೆ ಕರೆ ಕೊಡುತ್ತಾ ಬಂದಿದ್ದರು ಇತ್ತೀಚೆಗೆ ನಡೆದ ಸಿಎಎ ವಿರೋಧಿ ಹೋರಾಟಗಳಲ್ಲಿ ರಾಜ್ಯಾದ್ಯಂತ ಅನೇಕಾರು ಸಭೆಗಳಲ್ಲಿ ಭಾಗವಹಿಸಿದ್ದರು. ನಮ್ಮ ಧ್ವನಿ ಅನ್ನುವ ಯುಟ್ಯೂಬ್ ಚಾನೆಲ್ ನ ಮೂಲಕ ಅನೇಕ ಕಾರ್ಯಕ್ರಮಗಳನ್ನು ಕಟ್ಟಿಕೊಟ್ಟಿದ್ದರು. ಹಲವಾರು ಸಂದರ್ಶನಗಳನ್ನೂ ಅದರಲ್ಲಿ ಬಿತ್ತರಿಸಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












