ಅಝಾನ್ ಕರೆಗೆ ತಡೆ: ದೆಹಲಿ ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ- ಆದೇಶ ಹಿಂದಕ್ಕೆ

0
1383

ಸನ್ಮಾರ್ಗ ವಾರ್ತೆ

ನವದೆಹಲಿ, ಎಪ್ರಿಲ್ 25- ರಮಝಾನ್ ವ್ರತಾನುಷ್ಠಾನ ಪ್ರಾರಂಭವಾದ ಶನಿವಾರದಂದು ದೆಹಲಿಯ ಹಲವು ಮಸೀದಿಗಳಲ್ಲಿ ಅಝಾನ್ ಕರೆಯನ್ನು ತಡೆಯಲು ಪೊಲೀಸರು ಶ್ರಮಿಸಿದ್ದು, ವಿವಾದಕ್ಕೆ ಎಡೆಮಾಡಿದೆ.

ಲೆಫ್ಟಿನೆಂಟ್ ಗವರ್ನರ್ ಅವರ ಸೂಚನೆಯಂತೆ ತಾವು ಅಝಾನ್ ಕರೆಯನ್ನು ತಡೆಯುತ್ತಿರುವುದಾಗಿ ಹೇಳಿಕೊಂಡ ಪೊಲೀಸರು, ಆ ಬಗ್ಗೆ ನಾಗರಿಕರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಈ ಕ್ರಮವನ್ನು ಸಾಮಾಜಿಕ ಜಾಲತಾಣಗಳು ಮತ್ತು ಮುಸ್ಲಿಂ ನಾಯಕರು ಖಂಡಿಸಿ ರಂಗ ಪ್ರವೇಶಿಸಿದ ಕೂಡಲೇ ಇಂಥದ್ದೊಂದು ಆದೇಶ ನೀಡಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿಕೊಂಡು ಪ್ರಕರಣಕ್ಕೆ ತೆರೆ ಎಳೆಯಲು ಮುಂದಾಗಿದೆ.

ದೆಹಲಿಯ ಪ್ರೇಮ್ ನಗರ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಹೀಗೆ ಅಝಾನ್ ಕರೆಯನ್ನು ತಡೆಯಲು ಮುಂದಾದ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗುತ್ತಿರುವಂತೆ ಬೇರೆಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಇಂಥ ಕ್ರಮ ನಡೆದಿರುವುದು ಬೆಳಕಿಗೆ ಬಂತು ಎಂದು ಅಖಿಲ ಭಾರತ ಮುಸ್ಲಿಂ ಮಜ್ಲಿಸೆ ಮುಶಾವರದ ಅಧ್ಯಕ್ಷರಾದ ನವೈದ್ ಹಮೀದ್ ತಿಳಿಸಿದ್ದಾರೆ.

ಆದರೆ ರಮಝಾನಿನಲ್ಲಿ ಇಫ್ತಾರ್ ಮತ್ತು ಸಹರಿಯ ಸಮಯವನ್ನು ತಿಳಿದುಕೊಳ್ಳಲು ಜನರು ಆಝಾನನ್ನೇ ಅವಲಂಭಿಸಿದ್ದಾರೆ ಅನ್ನುವ ಮಾಹಿತಿಯನ್ನು ಪೊಲೀಸರಿಗೆ ನೀಡಿದಾಗ ಇದನ್ನು ಲೆಫ್ಟಿನೆಂಟ್ ಗವರ್ನರ್ ಗೆ ತಿಳಿಸಬೇಕೆಂದು ಅವರು ಸೂಚಿಸಿದ್ದು, ಆದರೆ ಮುಸ್ಲಿಂ ನಾಯಕರು ಅದಕ್ಕೆ ಸಿದ್ಧರಾಗದೆ ಹೋದಾಗ ಕೊನೆಗೆ ಅಝಾನ್ ಕರೆಯನ್ನು ತಡೆಯಬಾರದೆಂದು ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆಯೆಂದು ನವೈದ್ ಹಮೀದ್ ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.