ಮಹೇಂದ್ರ ಕುಮಾರ್ ಕನಸಿದ ಸಮಾಜವನ್ನು ಸಾಧ್ಯವಾಗಿಸೋಣ: ಬೆಳಗಾಮಿ ಮುಹಮ್ಮದ್ ಸಾದ್

0
1998

ಸನ್ಮಾರ್ಗ ವಾರ್ತೆ

ಬೆಂಗಳೂರು-  ವಾಗ್ಮಿ ಮತ್ತು ಹೋರಾಟಗಾರ ಮಹೇಂದ್ರ ಕುಮಾರ್ ಕೊಪ್ಪ ಅವರ ನಿಧನವು ಸಾಮಾಜಿಕ ಹೋರಾಟ ಮತ್ತು ಚಳವಳಿ ನಿರತ ಎಲ್ಲ ಸಮಾಜಮುಖಿ ಜನರ ಪಾಲಿಗೆ ಅತಿ ದೊಡ್ಡ ನಷ್ಟವಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ಹೇಳಿದ್ದಾರೆ.

ತನ್ನ ಪೂರ್ವಾಶ್ರಮದ ಸಂಘಟನೆಯಿಂದ ಹೊರಬಂದು ಯುವ ಸಮೂಹವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತೆ ಅವರು ಶಕ್ತಿ ಮೀರಿ ಪ್ರಯತ್ನಿಸಿದ್ದರು. ದ್ವೇಷದ ವಾತಾವರಣವನ್ನು ತೊಡೆದು ಹಾಕಿ ಅಂತಹ ಮನಸ್ಥಿತಿಯಿಂದ ಯುವಜನರನ್ನು ಹೊರತರಲು ಯತ್ನಿಸಿದ್ದರು. ಅಂತಹ ಸಂದೇಶವನ್ನು ನೀಡಬಲ್ಲ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡರು. ನಮ್ಮ ಧ್ವನಿ ಎಂಬ ಯು ಟ್ಯೂಬ್ ಚಾನೆಲ್ ಮೂಲಕ ಮಾನವಪ್ರೇಮಿ ಸಮಾಜ ಕಟ್ಟುವ ಪ್ರಯತ್ನವನ್ನು ಮಾಡಿದ್ದರು. ಅವರ ನಿಧನವು ಈ ದಿಸೆಯಲ್ಲಿ ದೊಡ್ಡ ನಷ್ಟವಾದರೂ ಅವರು ತೋರಿಸಿಕೊಟ್ಟ ಹಾದಿಯಲ್ಲಿ ಸಾಗಬೇಕಾದುದು ಮತ್ತು ಅವರ ಕನಸಿನ ಸಮಾಜವನ್ನು ಸಾಧ್ಯವಾಗಿಸಬೇಕಾದುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದವರು ಹೇಳಿದ್ದಾರೆ.

ಇದೇವೇಳೆ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ, ಸಾರ್ವಜನಿಕ ಸಂಪರ್ಕಾಧಿಕಾರಿ ಮುಹಮ್ಮದ್ ರೈಹಾನ್ ಅವರು ಮಹೇಂದ್ರ ಕುಮಾರ್ ಅವರ ಪಾರ್ಥಿವ ಶರೀರವನ್ನು ಸಂದರ್ಶಿಸಿದರಲ್ಲದೇ, ಪತ್ನಿ ಮತ್ತು ಮಕ್ಕಳನ್ನು ಸಾಂತ್ವನಿಸಿದರು.

ಹಾಗೆಯೇ, ಜಮಾಅತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕರಾದ ಎ. ಸಯೀದ್ ಇಸ್ಮಾಈಲ್ ಅವರು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿ, ಜೀವನವನ್ನೇ ಹೋರಾಟಕ್ಕೆ ಮುಡಿಪಾಗಿಟ್ಟ ಶ್ರೀ ಮಹೇಂದ್ರ ಕುಮಾರ್ ಕೊಪ್ಪ ಅವರ ನಿಧನವು ಭಾರತೀಯರಿಗೆ ಅಪಾರ ನೋವು ತಂದಿದೆ. ಕಳೆದ ಕೆಲವು ವರ್ಷಗಳಿಂದ ತನ್ನನ್ನು ದೇಶದ, ಒಗ್ಗಟ್ಟು, ಶಾಂತಿ ಸೌಹಾರ್ದತೆಗಾಗಿ, ಮೀಸಲಿಟ್ಟು ದೇಶದ ಜನತೆಗೆ ಧೈರ್ಯ ತುಂಬುತ್ತಾ ಅದಕ್ಕಾಗಿ ತನ್ನನ್ನು ಅರ್ಪಿಸಿದ ಕೆಚ್ಚೆದೆಯ ತ್ಯಾಗಿಯ ವಿದಾಯ ದುಃಖಕ್ಕೀಡು ಮಾಡಿದೆ ಎಂದು ಅವರು ಹೇಳಿದ್ದಾರೆ.

ಅವರು ತೋರಿಸಿ ಕೊಟ್ಟ ವೈಚಾರಿಕತೆಯ ಹಾದಿ ನಮಗೆ ಮಾರ್ಗ ದರ್ಶನವಾಗಲಿ. ಅವರು ಪ್ರತಿಪಾದಿಸಿದ ಸೌಹಾರ್ದತೆ ಮತ್ತು ಸಹಿಷ್ಣುತೆ ಮುಂದುವರಿಯಲಿ. ಅವರ ಅಗಲುವಿಕೆಯ ದುಃಖವನ್ನು ಸಹಿಸಲು ಅವರ ಕುಟುಂಬಕ್ಕೂ, ಅವರ ಮಿತ್ರರಿಗೂ, ಅಪಾರ ಅಭಿಮಾನಿಗಳಿಗೂ ದೇವನು ಸಹನೆಯನ್ನು ನೀಡಲಿ ಎಂದವರು ಪ್ರಾರ್ಥಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.