ಸೋಪ್ ವಾಟರ್ ನಿಂದ ಸಾಯುವ ವೈರಸ್ ನ ಮುಂದೆ ನಾವು- ನೀವು

0
1019

ಸನ್ಮಾರ್ಗ ವಾರ್ತೆ

ಡಿ.ಕೆ.ಇಬ್ರಾಹಿಂ, ಕಲ್ಲಡ್ಕ
‌‌

ಜಗತ್ತಿನ ಮಾನವ ಸಮೂಹಕ್ಕೆ ಅತೀ ಮಾರಕವಾದ ಕೊರೊನಾ ವೈರಸ್ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿ, ಮನುಷ್ಯ ಜೀವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಮಳೆಯ ರೂಪದಲ್ಲಿ ಕೆಲವು ರಾಷ್ಟ್ರಗಳಲ್ಲಿ ತುಂತುರು, ಮತ್ತೆ ಕೆಲವು ಕಡೆ ಜಲಧಾರೆಯಾಗಿ ಕೆಲವು ಕಡೆ ಪ್ರವಾಹವಾಗಿ ಮುಂದುವರಿದು ಕೆಲವು ಕಡೆ ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಭಿಕ್ಷುಕರಿಂದ ಹಿಡಿದು ಅಗರ್ಭ ಶ್ರೀಮಂತರಾದಿಯಾಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮತ್ತು ಮನಸ್ಸಿನ ಆಳದಲ್ಲಿ ಒಂದು ತರದ ಆತಂಕ ಅಥವಾ ಭೀತಿ ಮನೆಮಾಡಿದೆ. ಮುಂದೆ ಏನಾಗುವುದು? ಈ ಪ್ರಶ್ನೆಗೆ ಉತ್ತರಿಸುವ ಮೊದಲು ನಾವು ಈಗ ಏನು ಮಾಡಬಹುದು ? ಏನು ಮಾಡಬೇಕು ? ಎನ್ನುವುದು ಮುಖ್ಯ. ನಮ್ಮ ಕೇಂದ್ರ/ರಾಜ್ಯ ಸರ್ಕಾರದ ನಿಯಮ ನಿಬಂಧನೆಗಳನ್ನು ಕಾನೂನು ಕಟ್ಟಳೆಗಳನ್ನು ಸಂಪೂರ್ಣವಾಗಿ ಸ್ವಯಂ ಪಾಲಿಸುವುದು ಮತ್ತು ತಮ್ಮ ಕುಟುಂಬದಲ್ಲಿ ತಿಳುವಳಿಕೆ ಮೂಡಿಸಿಕೊಂಡು ಸೌಹಾರ್ದಯುತವಾಗಿ ಬಾಳುವುದು, ಇವುಗಳು ಕಡ್ಡಾಯವೆಂದು ನಮ್ಮ ಮೇಲೆ ಹೇರಿಕೊಳ್ಳುವುದು.

ಚೀನಾದಿಂದ ಪ್ರಾರಂಭವಾದ ಈ ಹೆಮ್ಮಾರಿ ಭಾರತ ತಲುಪುವಾಗ ಅದು ಟೋಪಿ, ಗಡ್ಡ, ಪೈಜಾಮ ಧರಿಸಿ ಮತಾಂತರಾಯಿತು. ಕಾಕತಾಳೀಯವಾಗಿ ದೆಹಲಿಯ ನಿಝಾಮುದ್ದೀನ್‌‌ನಲ್ಲಿ ತಬ್ಲೀಗಿನವರ ಒಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಬೇರೆ ಬೇರೆ ರಾಜ್ಯದ ಪ್ರತಿನಿಧಿಗಳು ಊರಿಗೆ ಹಿಂತಿರುಗಲಾಗದೆ ಅಲ್ಲಿ ಸಿಕ್ಕಿಕೊಂಡು ನಂತರ ಕಷ್ಟಪಟ್ಟು ಮನೆ ಸೇರಿರಬಹುದು. ಇಷ್ಟಾದದ್ದೇ ತಡ ಹೆಚ್ಚಿನ ಎಲ್ಲಾ ಮಾಧ್ಯಮಗಳೂ ವಿಷ ಮಾರಾಟ ಮಾಡಿ ಮುಗ್ಧ ಜನರಿಗೆ ಉಣಿಸಿ ತಮ್ಮ ಖಜಾನೆ ತುಂಬಿಸಿಕೊಂಡವು. ಇದರಲ್ಲಿ ಯಾರ್ಯಾರ ಎಷ್ಟು ಪಾಲಿತ್ತೋ ಅಷ್ಟು ಗಳಿಸಿಕೊಂಡವು. ಯಾವುದೋ ಹಳೆಯ ವಿಡಿಯೋ/ಫೊಟೊ/ಕ್ಲಿಪ್ಲಿಂಗ್‌ಗಳು ಯಾರದೋ ಸಂಭಾಷಣೆ ಎಲ್ಲೆಲ್ಲೊ ಹರಿದಾಡಿದವು. ನಮ್ಮ ಪ್ರದೇಶಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರಗಳು ಪ್ರತ್ಯಕ್ಷವಾದುವು.

ಎಲ್ಲಿವರೆಗೆಯೆಂದರೆ ರಾಜ್ಯದ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಬೇಕಾಯಿತು. ಮುಸ್ಲಿಂ ಸಹೋದರರಲ್ಲಿ ನನ್ನದೊಂದು ಕಳಕಳಿಯ ಮನವಿ ಏನೆಂದರೆ, ಈ ವರೆಗೆ ಎಲ್ಲಾ ತರದ ಸುಳ್ಳು ಸುದ್ದಿಗಳು, ಆರೋಪಗಳು, ತುಂಬಿ ತುಳುಕುವ ವಿಷದ ಮಾರುಕಟ್ಟೆಗಳು ಕೋಮುವಾದಿ ಚಿಂತನೆಗಳು ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಮತ್ತು ಬಹಿಷ್ಕಾರದ ಬೆದರಿಕೆಗಳು ಮುಂತಾದ ಎಲ್ಲವನ್ನೂ ಮುಸ್ಲಿಮರಾದ ನಾವು ಹೃದಯ ಶ್ರೀಮಂತಿಕೆಯಿಂದ ತಕ್ಷಣ ಮರೆತುಬಿಡಬೇಕು, ಕ್ಷಮಿಸಿಬಿಡಬೇಕು. ಈ ಬಹಿಷ್ಕಾರ ಹೊಸತೇನಲ್ಲ. ಇಸ್ಲಾಮಿನ ಇತಿಹಾಸ ನಮಗೆಲ್ಲ ತಿಳಿದಿದೆ. ಮಾನವ ಕುಲದ ರಕ್ಷಕರು, ಸಾಮಾಜಿಕ ನ್ಯಾಯದ ನ್ಯಾಯಾಧೀಶರು, ಅನಾಥರ ಸಂರಕ್ಷಕರು, ಬಡತನ ನಿರ್ಮೂಲನದ ಪ್ರಧಾನ ಸೂತ್ರಧಾರಿಗಳು ಮತ್ತು ಮಾನವರು ಮತ್ತು ದೇವನ ಮಧ್ಯೆ ಇರುವ ಎಲ್ಲಾ ತರದ ಅಡೆತಡೆಗಳನ್ನು ಕಿತ್ತೊಗೆದು ಮನುಷ್ಯನನ್ನು ದೇವನ ದಾಸನನ್ನಾಗಿ ಮಾಡಿದ ಲೋಕ ನಾಯಕ ಪ್ರವಾದಿ ಮುಹಮ್ಮದ್ (ಸ)ರವರು ಮತ್ತು ಅವರ ಅನುಯಾಯಿಗಳು ಎರಡೂವರೆ ವರ್ಷಗಳು ಅಬೂತಾಲಿಬ್ ಕಣಿವೆಯಲ್ಲಿ ಮರದ ಸೊಪ್ಪು ತಿಂದು ಮಹಿಳೆಯರು ಮಕ್ಕಳು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿನಲ್ಲಿ ನೆನೆಸಿಕೊಳ್ಳುವುದು ಈಗ ಕಾಲದ ಬೇಡಿಕೆಯಾಗಿದೆ.

ನಮ್ಮ ಆತ್ಮಶುದ್ಧಿಗೆ ದಾರಿ ಕೂಡ ಆಗಲಿದೆ. ಸರಕಾರದ ನೆರವಿನ ಹೊರತಾಗಿಯೂ ಜಾತಿ ಮತ ಭೇದವಿಲ್ಲದೆ ಯಾರೂ ಕೂಡ ಹಸಿವಿನಿಂದ ಇರಬಾರದು, ಔಷಧಿ ಸಿಗದೆ ಕಷ್ಟಪಡಬಾರದು. ನಾವು ಆಹಾರದ ಕಿಟ್‌‌ಗಳನ್ನು ನಮ್ಮ ಹಿಂದೂ ಸಹೋದರರ ಮನೆಗಳಿಗೆ ಹೊತ್ತುಕೊಂಡು ಹೋದಾಗ ‘ನಿಮ್ಮ ರೇಷನ್ ಕಿಟ್ ನಮಗೆ ಬೇಡ’ ಎಂದರೂ, ಜಾತಿನಿಂದನೆ ಮಾಡಿದರೂ ನಾವು ತಾಳ್ಮೆ ಕಳೆದುಕೊಳ್ಳಬಾರದು. ಏಕೆಂದರೆ ಅವರಿಗೆ ಅವರು ಏನು ಮಾಡುತ್ತಾರೆಂದು ಗೊತ್ತಿರುವುದಿಲ್ಲ. ಈ ದೇಶದ ಬಹುಪಾಲು ಹಿಂದೂಗಳು ಶಾಂತಿಪ್ರಿಯರು, ನ್ಯಾಯಪ್ರಿಯರು, ಶುದ್ಧ ಮಾನವ ಹೃದಯ ಉಳ್ಳವರು. ಆದುದರಿಂದ ನಾವೆಲ್ಲ ಈ ಆಪತ್ಕಾಲದಲ್ಲಿ ಹಿಂದು ಮುಸ್ಲಿಮ್ ಕ್ರೈಸ್ತ ಸಿಕ್ಖ್ ಜೈನ ಬುದ್ಧ ಒಟ್ಟಿನಲ್ಲಿ ಮಾನವ ಕುಲದೊಂದಿಗೆ ಪ್ರೀತಿಯ ನಂಬಿಕೆಯ ಸೌಜನ್ಯದ ಸಹಾನುಭೂತಿಯ ಸಂಬಂಧ ಬೆಳೆಸಬೇಕಾಗಿದೆ. ಭೂಮಿಯಲ್ಲಿ ಸಿಗುವ ಪ್ರಚಾರ ಪ್ರಶಂಸೆ ಪ್ರಶಸ್ತಿ ಪುರಸ್ಕಾರ ಮುಂತಾದವುಗಳು ನಮ್ಮ ಕಾಲಡಿಯ ಕಸದಂತಿರಬೇಕು. ವಿಶ್ವಾಸಿಗಳಿಗೆ ದೊರಕುವುದು ಒಂದು ಪ್ರತಿಫಲ ಮಾತ್ರ. ಒಂದೋ ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ. ಎಲ್ಲಿ ಬೇಕೆಂದು ತೀರ್ಮಾನಿಸುವುದು ನಮಗೆ ಬಿಟ್ಟದ್ದು. ಎರಡೂ ಒಬ್ಬನಿಗೆ ಸಿಗುವುದು ಅಸಾಧ್ಯದ ಮಾತು. ಚೀನಾದಲ್ಲಿ ಈ ವೈರಸ್ ಕಾಣಿಸಿಕೊಂಡಾಗ ಅದರ ಭೀಕರತೆಯನ್ನು ಸರಿಯಾಗಿ ನಾವು ಅರ್ಥಮಾಡಿಕೊಂಡಿರಲಿಲ್ಲ.

ಸಣ್ಣ ಒಂದು ಅಣುಗಾತ್ರದ ವೈರಸ್ ಬರೀ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಸೋಪ್ ವಾಟರ್‌‌ನಿಂದ ಸಾಯುತ್ತದೆ, ಸೋಪ್ ಅಂದರೆ ಕೇವಲ ಹ್ಯಾಂಡ್‌‌ವಾಷ್ ಅಥವಾ ಸ್ನಾನದ ಸಾಬೂನು. ಬಟ್ಟೆ ಒಗೆಯುವ ಸಾಬೂನು ಅಗತ್ಯವಿಲ್ಲ ಇದಕ್ಕೆ. ಈ ವರೆಗೆ ಔಷಧಿ ಕಂಡುಹಿಡಿಯಲಾಗಲಿಲ್ಲ. ಸದ್ಯಕ್ಕೆ ತಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರುವುದು, ಮೂಗು ಬಾಯಿ ಮುಚ್ಚಿಕೊಂಡು ಅಂತರ ಕಾಪಾಡುವುದು. ಕೊರೊನಾ ವೈರಸನ್ನು ಕೊಲ್ಲಲು ಯಾವುದೇ ಬಾಂಬು, ಕ್ಷಿಪಣಿ, ಸೇನೆ, ಇನ್ನಿತರ ಆಧುನಿಕ ಸಮೂಹ ನಾಶಕ ಅಸ್ತ್ರದ ಅಗತ್ಯವಿಲ್ಲ. ಒಟ್ಟಿನಲ್ಲಿ ಮಾನವರ ಈ ವರೆಗಿನ ತಂತ್ರಜ್ಞಾನ ಯಾವ ಉಪಯೋಗಕ್ಕೂ ಬರಲಿಲ್ಲ. ದೇವನ ತಂತ್ರಗಾರಿಕೆ ಮನುಷ್ಯನ ಕುತಂತ್ರದ ಎದುರಿಗೆ ಯಾವ ಪ್ರಯೋಜನಕ್ಕೂ ಬರುವ ನಿರೀಕ್ಷೆ ಇಲ್ಲ. ಮಾನವ ಸಮೂಹ ತನ್ನ ಕೈಯಾರೆ ಮಾಡಿದ ಅನ್ಯಾಯದ ಫಲವನ್ನು ನಾವು ಈ ಹಿಂದೆ ಮಳೆಯ ರೂಪದಲ್ಲಿ, ನೆರೆಯ ರೂಪದಲ್ಲಿ, ಚಂಡಮಾರುತದ ರೂಪದಲ್ಲಿ, ಭೂಕಂಪ ಕಾಡ್ಗಿಚ್ಚಿನ ರೂಪದಲ್ಲಿ ಅನುಭವಿಸಿ ಸಹಸ್ರಗಟ್ಟಲೆ ಜೀವಗಳನ್ನು, ಲಕ್ಷ ಕೋಟಿಗಟ್ಟಲೆ ಸಂಪನ್ಮೂಲಗಳನ್ನು ಕಳೆದುಕೊಂಡಿದ್ದೇವೆ.

ಆದರೂ ನಾವು ಮಾನವರು ಪಾಠ ಕಲಿಯಲಿಲ್ಲ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದು ತಲುಪಲಿಲ್ಲ. ಈಗಾಗಲೇ ಇಡೀ ಜಗತ್ತನ್ನು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮ ಮಾಡುವ ಅಸ್ತ್ರವನ್ನು ತಮ್ಮ ತಮ್ಮ ರಾಷ್ಟ್ರವನ್ನು ಕಾಪಾಡಲು ಶೇಖರಿಸಿಕೊಂಡಿದ್ದೇವೆ. ಕಳೆದ ಸುಮಾರು 200 ವರ್ಷಗಳಿಂದ ಮನುಷ್ಯ ಎಸಗಿದ ಅನ್ಯಾಯ, ಅಕ್ರಮ, ಸಾಮೂಹಿಕ ಹತ್ಯೆ ಅತ್ಯಾಚಾರ, ಭ್ರೂಣದಲ್ಲಿರುವ ಶಿಶುವಿನಿಂದ 90-100 ಪ್ರಾಯದ ಹಿರಿಯರ ವರೆಗಿನ ಮಾನವರ ಹತ್ಯೆ, ಜಾತಿಯ ಉಚ್ಛನೀಚತೆಯ ಜನಾಂಗೀಯ ದರ್ಪ, ಶ್ರೀಮಂತಿಕೆಯ ಮದ, ನ್ಯಾಯದ ನಿರಾಕರಣೆ, ದುರಹಂಕಾರದ ಅಮಲು, ಸ್ವಜನ ಪಕ್ಷಪಾತದ ಮೇಲ್ಮೆ, ಪಂಚಾಯತ್ ಅಧ್ಯಕ್ಷರಿಂದ ಆರಕ್ಷಕ ಅಧಿಕಾರಿಗಳು, ಆರೋಗ್ಯ ಕೇಂದ್ರದ ಮುಖ್ಯಸ್ಥರು, ನ್ಯಾಯಾಲಯಗಳು, ನ್ಯಾಯಾಧೀಶರು, ಚುನಾಯಿತ ರಾಜಕಾರಣಿಗಳು, ಇವುಗಳಲ್ಲಿ ಕೆಲವನ್ನು ಖರೀದಿಸಲಾಯಿತು. ಕೆಲವರು ತಮ್ಮನ್ನು ಮಾರಿಕೊಂಡರು. ಕೆಲವು ರಾಜಕುಟುಂಬಗಳು ತನ್ನ ಒಡ ಹುಟ್ಟಿದವರನ್ನು ಕತ್ತಲೆಯ ಜೈಲಿಗಟ್ಟಿದವು. ಅಥವಾ ಇನ್ನಿಲ್ಲದಂತೆ ಮಾಡಲಾಯಿತು.

ಮೇಲಿನ ಸ್ವಭಾವವನ್ನು ರೂಢಿಸಿಕೊಂಡ ಜಗತ್ತಿನ ಮುಖ್ಯಸ್ಥರು ಆಡಳಿತಗಾರರು ದೇವನ ಶಿಕ್ಷೆಯಂತಿರುವ ಕೊರೊನಾ ಅಥವಾ ಕೊಲ್ಲುವ ವೈರಸ್ ಈ ಭೂಮಿಯ ಮೇಲೆ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗುತ್ತಿರುವಾಗ ಅಹಂಕಾರಿಗಳು ದುರಹಂಕಾರಿಗಳಾದರು. ಕೋಮುವಾದ ಸ್ವಜನ ಪಕ್ಷಪಾತಿಗಳು, ಕೊಲೆಗಡುಕರು, ಅತ್ಯಾಚಾರಿಗಳು, ಜಾತಿ ಕುಲ ಗೋತ್ರ ವಂಶ ವರ್ಣ ಮುಂತಾದ ವಿಷದ ಚಿಲ್ಲರೆ ವ್ಯಾಪಾರಸ್ಥರು ‘ಸಗಟು’ ವ್ಯಾಪಾರದಲ್ಲಿ ತೊಡಗಿದರು. ನಾಲಿಗೆಯನ್ನು ಬಿಗಿ ಹಿಡಿದು ದೇವನೊಂದಿಗೆ ತನ್ನ ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟು ಮರಳ ಬೇಕಾದ ಮಾನವ ಸಮೂಹ ಈಗಿನ ಸ್ಥಿತಿಗತಿಯಿಂದ ಅಧೋಗತಿಗೆ ಇಳಿಯುತ್ತಿದೆ ಎಂಬುದೇ ವಾಸ್ತವ. ಪ್ರಸ್ತಾಪಿಸಿದ ಕೋವಿಡ್-19 ವೈರಸ್‌ನಲ್ಲಿ ಭೂಮಿಯ ಮೇಲೆ ಇಳಿಸಿದ ಅಥವಾ ಹರಡಿದ ಕ್ಷಣ ನಮಗಾರಿಗೂ ತಿಳಿದಿಲ್ಲ. ಒಂದು ವೇಳೆ ಜೈವಿಕ ಅಸ್ತ್ರವಾಗಿದ್ದರೆ ? ಅಥವಾ ವಿರುದ್ಧವಾಗಿದ್ದರೆ ? ಹಾಗೆ ಮನುಷ್ಯ ತನ್ನ ಕೈಗಳಿಂದ ಈ ವರೆಗೆ ಸೃಷ್ಟಿಸಿದ ಎಲ್ಲಾ ತರದ ಅನ್ಯಾಯ ಅಕ್ರಮ ದೌರ್ಜನ್ಯ ಮತ್ತು ಧರ್ಮಬಾಹಿರ ಕೃತ್ಯಗಳಿಂದ ನಮ್ಮ ಅಂದರೆ ಮಾನವರ ಕೈ ಬಾಯಿ ಹೃದಯ ಮತ್ತು ಮಸ್ತಿಷ್ಕಗಳನ್ನು ಕಪ್ಪಾಗಿಸಿಕೊಂಡಿದ್ದೇವೆ.

ಉದಾಃ ಫೆಲೆಸ್ತೀನ್ (ಗಾಝಾ) ಲಿಬಿಯಾ ಈಜಿಪ್ಟ್ ಇರಾಕ್ ಅಫ್ಘಾನಿಸ್ತಾನ ಮುಂತಾದ ರಾಷ್ಟ್ರಗಳ ಮೇಲೆ ನಿರಂತರ ದಾಳಿ ಮಾಡಿ ಲಕ್ಷಗಟ್ಟಲೆ ಮಾನವ ಜೀವಿಯನ್ನು ಕೊಂದು ಮುಗಿಸಿದಾಗ ಒಂದು ಬಹುಸಂಖ್ಯೆಯ ಅನುಯಾಯಿಗಳಿರುವ ಧರ್ಮದ ನೇತಾರ (ಸುಪ್ರೀಂ) ಜೀವಂತ ಇರುವಾಗ ಈ ವರೆಗೆ ತುಟಿ ಬಿಚ್ಚಿ ಖಂಡಿಸಿಲ್ಲ, ಈ ಹಿಂದೆ ಧರ್ಮಗ್ರಂಥ ನೀಡಲ್ಪಟ್ಟ ಎರಡು ಸಮುದಾಯ ತಮ್ಮ ತಮ್ಮ ಧರ್ಮ ವಿಶ್ವಾಸದಲ್ಲಿ ಒಗ್ಗಟ್ಟಾಗುವುದೆಂದರೆ ಜಗತ್ತಿನ ಎಂಟನೇ ಅದ್ಭುತವೇ ಸರಿ. ಏಕೆಂದರೆ ಪರಸ್ಪರ ವೈರುದ್ಯ ನಂಬಿಕೆಗಳಿರುವ ಅವರು ಇಸ್ಲಾಮಿನ ವಿರುದ್ಧ ನ್ಯಾಯದ ವಿರುದ್ಧ, ಮಾನವತೆಯ ವಿರುದ್ಧ, ಸದಾಚಾರದ ವಿರುದ್ಧ ಯಾವ ಭಿನ್ನಾಭಿಪ್ರಾಯ ಕೂಡ ಇಲ್ಲ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ತಿನ್ನುವ ಆಹಾರದ ನೆಪದಲ್ಲಿ, ಮತಾಂತರದ ನೆಪದಲ್ಲಿ, ನಾಗರಿಕತೆಯ ಹೆಸರಲ್ಲಿ, ಧಾರ್ಮಿಕ ಲಾಂಛನದ ನೇಪತ್ಯದಲ್ಲಿ ವಸ್ತ್ರ ಧಾರಣೆಯ ವಿಷಯದಲ್ಲಿ ರಾಜ್ಯಗಳ ಗಡಿರೇಖೆಯ ನಂಬಿಕೆಯಲ್ಲಿ, ಭಾಷೆಯ ಸಂಕುಚಿತತೆಯಲ್ಲಿ, ಮನುಷ್ಯನ ಬಣ್ಣಗಳ ಮೇಲ್ಮೆಯಲ್ಲಿ ಮುಳುಗಿ ನಮ್ಮನ್ನು ಯಾರೂ ಕೇಳುಗರಿಲ್ಲ, ನಮಗೆ ಯಾರೂ ಹೇಳುವವರಿಲ್ಲ, ನಾವು ಹೇಳಿದ್ದು ಮಾಡಿದ್ದು ನಮ್ಮ ತೀರ್ಮಾನವೇ ಸರಿ ಎಂದು ಭಾವಿಸಿಕೊಂಡಿದ್ದೇವೆ.

ಕೊನೆಯದಾಗಿ ಏಕೈಕ ದೇವನ ದಾಸನಾಗಿ ಒಂದು ಧರ್ಮಗ್ರಂಥದ (ಕುರ್‌ಆನ್) ವಾಹಕರಾಗಿ ಪ್ರವಾದಿ ಮುಹಮ್ಮದ (ಸ) ರ ಅನುಯಾಯಿಗಳಾಗಿ ಒಂದೇ ಖಿಬ್ಲಾಕ್ಕೆ ಮುಖ ಮಾಡುವ ಇಸ್ಲಾಮಿನ ಮೂಲಭೂತ ವಿಶ್ವಾಸಗಳಲ್ಲಿ ಸಂಪೂರ್ಣ ಸಹಮತವಿರುವ ಒಂದೇ ಒಂದು ಸಮುದಾಯವಾಗಿರುವ ಮುಸ್ಲಿಮರ ಪರಿಸ್ಥಿತಿ ದೇಶದ ಆಡಳಿತದಲ್ಲಿ ಆಧುನಿಕ ವ್ಯಾಮೋಹವೇ ನನ್ನ ಧರ್ಮ ಎಂಬಂತಿದೆ. ಇದೆಲ್ಲವನ್ನು ಮುಂದಿಟ್ಟುಕೊಂಡು ಜಗತ್ತನ್ನು ಮತ್ತು ಅದರ ವ್ಯವಸ್ಥೆಯನ್ನು ಹೃದಯವೆಂಬ ಕಣ್ಣಿನಿಂದ ಅವಲೋಕನ ಮಾಡುವಾಗ ನಮ್ಮ ಹಣೆ ದೇವನ ಮುಂದೆ ಸಾಷ್ಟಾಂಗವೆರಗಲು ಸಮಯ ಬರಲಿಲ್ಲವೇ ? ಬಂದಿದೆ ಮಾತ್ರವಲ್ಲ ಈಗಾಗಲೇ ನಾವು ದಾಟಿ ಬಹಳ ದೂರ ಕ್ರಮಿಸಿದ್ದೇವೆ. ಈ ಸಂದರ್ಭದಲ್ಲಿ ಒಂದು ವಿಷಯ ನಮಗೆ ಮನವರಿಕೆಯಾಗುತ್ತದೆ. ಅದೇನೆಂದರೆ, ಕೊರೊನಾ ವೈರಸ್ ವಿರುದ್ಧ ಹೋರಾಡುವ ಈ ಗಳಿಗೆಯಲ್ಲಿ ನಮಗೆಲ್ಲ ದೇವನು ಒಬ್ಬನೆ ಇದ್ದಾನೆ. ಏಕೆಂದರೆ ಬೇರೆ ಬೇರೆ ದೇವರುಗಳು ಇದ್ದಿದ್ದರೆ ಆ ದೇವರುಗಳ ನಂಬಿಕಸ್ಥರನ್ನು ಅವರವರೇ ರಕ್ಷಿಸುತ್ತಿದ್ದರು. ಅಥವಾ ರೋಗ ಬರುತ್ತಿರಲಿಲ್ಲ.

ಆದುದರಿಂದ ಆ ದೇವ ಒಬ್ಬನಾಗಿದ್ದಾನೆ. ಅವನನ್ನು ಬೇರೆ ಬೇರೆ ಧರ್ಮಗ್ರಂಥಗಳಲ್ಲಿ ಬೇರೆ ಬೇರೆ ನಾಮದಿಂದ ಕರೆಯುತ್ತಾರೆ. ಅರಬಿ ಭಾಷೆಯಲ್ಲಿ ಅಲ್ಲಾಹು ಅಥವಾ ಅಲ್ಲಾಹನು ಎಂದು ಕರೆಯುತ್ತೇವೆ. ಅವನಿಗೆ 99 ಅತ್ಯುತ್ತಮ ನಾಮಗಳಿವೆ. ಅವನೊಬ್ಬನೆ ಅನ್ನುವುದಕ್ಕೆ ಈ ಜಗತ್ತಿನಲ್ಲಿ ಇನ್ನೊಂದು ಉದಾಹರಣೆ ಈಗ ಜಗತ್ತಿನಲ್ಲಿ ಜೀವವಿರುವ ಮಾನವರ ಕೈಗಳ 10 ಬೆರಳಿನ ತುದಿಯ ಗುರುತುಗಳು. 600 ಕೋಟಿ ಮನುಷ್ಯರ ವಾಸನೆ ಬೇರೆ ಬೇರೆ, ಕಣ್ಣಿನ ಅಚ್ಚು, ಕೂದಲು, ಮಾನವನ ವೀರ್ಯ, ಎಲ್ಲವೂ ಬೇರೆ ಬೇರೆಯಾಗಿರುತ್ತದೆ. ಆದುದರಿಂದ ನಾವು ಹೃದಯವೆಂಬ ಕಣ್ಣುಗಳನ್ನು ತೆರೆದು ಜಗತ್ತನ್ನು ಮತ್ತು ಅದರಲ್ಲಿ ಹರಡಿಕೊಂಡಿರುವ ಜೀವಜಾಲಗಳನ್ನೂ ಅದ್ಭುತ ವ್ಯವಸ್ಥೆಯನ್ನೂ ಮನನ ಮಾಡಿ ದೇವನೆಡೆಗೆ ಮರಳಿ ನಮ್ಮನ್ನು ಸುಧಾರಿಸಿಕೊಳ್ಳಬೇಕಾಗಿದೆ. ಆ ಸೃಷ್ಟಿಕರ್ತ ನಮ್ಮನ್ನು ಅನುಗ್ರಹಿಸಲಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.