ಸನ್ಮಾರ್ಗ ವಾರ್ತೆ
ಮಂಗಳೂರು ಎಪ್ರಿಲ್ 27- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಕ್ಕೆ ಸಂಬಂಧಿಸಿ ಆತಂಕ ಇಮ್ಮಡಿ ಆಗುತ್ತಲೇ ಇದೆ. ಸೀಲ್ ಡೌನ್ ಗೆ ಒಳಗಾಗಿರುವ ಮಂಗಳೂರಿನ ಪಡೀಲ್ ಸಮೀಪದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ತಾಯಿ ಮತ್ತು ಆಕೆಯ ಮಗನಲ್ಲಿ ಕೊರೋನಾ ಸೋಂಕು ದೃಢವಾಗಿದ್ದು ಜಿಲ್ಲೆಯನ್ನು ಆತಂಕಕ್ಕೆ ತಳ್ಳಿದೆ.
ಇದೇ ಆಸ್ಪತ್ರೆಯಲ್ಲಿ ಶುಚಿತ್ವ ಕೆಲಸ ಮಾಡುತ್ತಿದ್ದ ನರಿಕೊಂಬು ಗ್ರಾಮದ ನಾಯಿಲ ನಿವಾಸಿಯಾದ ಮಹಿಳೆಯಲ್ಲಿ ಎರಡು ದಿನಗಳ ಹಿಂದಷ್ಟೇ ಕೊರೋನಾ ದೃಢವಾಗಿ ನಾಯಿಲ ಪ್ರದೇಶ ಸೀಲ್ ಡೌನ್ ಗೆ ಒಳಗಾಗಿತ್ತು. ಇದೀಗ ಕುಲಶೇಖರ ಕೂಡ ಸೀಲ್ ಡೌನ್ ಗೆ ಒಳಗಾಗಿದ್ದು ಸುತ್ತಮುತ್ತಲಿನ 7 ಕಿಲೋ ಮೀಟರ್ ವ್ಯಾಪ್ತಿಯು ಈ ಹಿನ್ನೆಲೆಯಲ್ಲಿ ಬಫರ್ ಝೋನ್ ಗೆ ಒಳಪಡಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕುಲಶೇಖರದ ನಿವಾಸಿಯಾಗಿರುವ 80 ವರ್ಷದ ಮಹಿಳೆ ಮತ್ತು ಆಕೆಯ 45 ವರ್ಷದ ಮಗನಲ್ಲಿ ಕೊರೋನಾ ದೃಢವಾಗಿದ್ದು ಇವರು ಇದೇ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಪಕ್ಕದ ಕೊಠಡಿಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದು ಮನೆಯಿಂದ ಯಾರು ಹೊರ ಬರದಂತೆ ಎಚ್ಚರಿಕೆ ನೀಡಿದೆ.
80 ವರ್ಷದ ತಾಯಿ ಮತ್ತು 45 ವರ್ಷದ ಮಗನಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಇವರು ವಾಸವಾಗಿದ್ದ ಮನೆಯಿಂದ ಸುಮಾರು 200 ಮೀಟರ್ ವ್ಯಾಪ್ತಿಯನ್ನು ನಿಯಂತ್ರಿತ ವಲಯವಾಗಿ ಘೋಷಿಸಲಾಗಿದ್ದು 22ಕ್ಕೂ ಅಧಿಕ ಮನೆಗಳ 120ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್ ಘೋಷಿಸಲಾಗಿದೆ.
ಕಕ್ಕೆಬೆಟ್ಟು ಸುತ್ತಮುತ್ತಲಿನ ಐದು ಕಿಲೋಮೀಟರ್ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ 4800 ಮನೆಗಳು 1300 ಅಂಗಡಿ-ಮುಂಗಟ್ಟುಗಳು 23 ಸಾವಿರ ಜನಸಂಖ್ಯೆ ಇದ್ದು ಇವರೆಲ್ಲರೂ ಇದರ ವ್ಯಾಪ್ತಿಗೆ ಬರುತ್ತಾರೆ. ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ವಾಮಂಜೂರು ಜಂಕ್ಷನ್, ಪಶ್ಚಿಮಕ್ಕೆ ಉರ್ವ ಮಾರ್ಕೆಟ್, ಉತ್ತರಕ್ಕೆ ಪದವಿನಂಗಡಿ, ದಕ್ಷಿಣಕ್ಕೆ ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಒಳಪಡುತ್ತದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ ಫರೆನ್ಸ್ ನಡೆಸಿದ್ದು ಮೇ ಮೂರರ ಬಳಿಕವೂ ಲಾಕ್ಡೌನ್ ಮುಂದುವರಿಸುವ ಸುಳಿವನ್ನು ನೀಡಿದ್ದಾರೆ. ಈ ಕುರಿತಂತೆ ಮಾಧ್ಯಮದ ಜೊತೆ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೇ 3ರ ಬಳಿಕ ಇನ್ನೆರಡು ವಾರಗಳ ತನಕ ಲಾಕ್ ಡೌನ್ ಮುಂದುವರಿಸುವ ಸುಳಿವನ್ನು ನೀಡಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












