ಸನ್ಮಾರ್ಗ ವಾರ್ತೆ
ಅಲ್ಮೈಡಾ ಗ್ಲಾಡ್ಸನ್ಚ್
ಸಾಲದ Write-off ವಿಷಯ ಬಂದಾಗಿನಿಂದ ಬ್ಯಾಂಕಿಗೆ ಪಂಗನಾಮ ಹಾಕಿದವರ ಪರ ವಕಾಲತ್ತು ವಹಿಸಿ ಮಾತಾನಾಡುತ್ತಿರುವ ಗುಂಡು ಪಾಳ್ಯ ಗ್ಯಾಂಗಿನವರ ಮೊದಲನೆಯ ವಾದಯೆಂದರೆ Write-off ಸಾಲ ಮನ್ನಾ ಅಲ್ಲ ಬದಲಾಗಿ ಬ್ಯಾಂಕಿನ ಬ್ಯಾಲನ್ಸ್ ಶೀಟ್ ಸ್ವಚ್ಚ ಮಾಡುವ ತಾಂತ್ರಿಕ ವಿಧಾನ. ಹಾಗಾಗಿ Write-off ಆದ ನಂತರನೂ ಬ್ಯಾಂಕುಗಳು ಈ ಸಾಲವನ್ನು ವಸೂಲು ಮಾಡುತ್ತವೆ ಎಂದು. ಆದರೆ ಕಳೆದ ಐದಾರು ವರುಷಗಳಲ್ಲಿ Write-off ಅದ ಸಾಲದ ವಸೂಲಿ ಪ್ರಮಾಣ ಸರಕಾರಿ ದಾಖಲೆಗಳ ಪ್ರಕರಾನೇ ಕೇವಲ ಹತ್ತು ಪರ್ಸೆಂಟ್ ಎಂದು ಅವರ ಮುಖಕ್ಕೆ ಬಡಿದಾಗ, ಇನ್ನೊಂದು ವಾದಸರಣಿ ಮುಂದಿಡುತ್ತಿದ್ದಾರೆ. ಅದೇ ಆಸ್ತಿ ಮುಟ್ಟುಗೋಲು.
ಹೌದು ಬ್ಯಾಂಕಿಗೆ ಪಂಗನಾಮ ಹಾಕಿದವರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿದೆ. ಹಾಗಾಗಿ ಅದರಿಂದ ದುಡ್ಡು ಬರುತ್ತೆ ಎಂದು. ನನಗರ್ಥವಾಗದ ವಿಷಯವೆಂದರೆ ಬ್ಯಾಂಕುಗಳನ್ನು ಮುಳುಗಿಸಿರುವ ಈ ಕ್ರಿಮಿನಲ್ಗಳ ಪರವಾಗಿ ಗ್ಯಾಂಗ್ಸ್ ಆಫ್ ನಾಗ್ಪುರ್ ಇಷ್ಟೊಂದು ವಕಾಲತ್ತು ಮಾಡುತ್ತಿರೋದ್ಯಾಕೆಂದು. ಯಾವುದೇ ಲಾಯರನ್ನು ಕೇಳಿ. ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿರುವ ಆಸ್ತಿಯನ್ನು liquidate ಮಾಡಲು ಅಥವ ನಗದೀಕರಿಸಲು ಎಷ್ಟೊಂದು ಸಮಯ ಬೇಕಾಗುತ್ತೆ, ಎಷ್ಟು ಪ್ರಕರಣಗಳಲಿ ಅದು ಸಾಧ್ಯವಾಗುತ್ತೆ ಎಂದು.
ಸುಮ್ಮನೆ ಒಂದು ಉದಾಹರಣೆಗೆ ವಿಜಯ ಮಲ್ಯರ ಪ್ರಕರಣ ತೆಗೆದುಕೊಳ್ಳೋಣ. ಅವರ ಮೇಲಿರುವ ಆರೋಪದ ಪ್ರಕಾರ ಅವರು ಬ್ಯಾಂಕುಗಳಿಗೆ ಪಂಗನಾಮ ಹಾಕಿರೋದು Rs 9000 ಕೋಟಿ. ಅವರು ಭಾರತ ಬಿಟ್ಟು ನಾಲ್ಕು ವರುಷಗಳಿಗಿಂತ ಹೆಚ್ಚಾಗಿವೆ. ಈ ಅವಧಿಯಲ್ಲಿ ಅವರ ಎಷ್ಟು ಆಸ್ತಿ ಜಪ್ತಿಯಾಗಿದೆ, ಅದರಲ್ಲಿ ಎಷ್ಟು liquidate ಆಗಿದೆ, ಎಷ್ಟು ಮಾರಾಟವಾಗಿದೆಯೆಂದು ಗೊತ್ತಿದೆಯೇ? ಅವರು ದೇಶ ಬಿಟ್ಟೋಗಿ ಒಂದು ವರುಷದೊಳಗೆ SBI ನೇತ್ರತ್ವದ ಬ್ಯಾಂಕುಗಳ ಒಕ್ಕೂಟ ಅವರ ಎರಡು ಮುಖ್ಯ ಆಸ್ತಿಗಳಾದ ಬೆಂಗಳೂರಿನ ಕಿಂಗ್ಫಿಶರ್ ಹೌಸ್ ಹಾಗೂ ಗೋವಾದ ಕಿಂಗ್ಫಿಶರ್ ವಿಲ್ಲಾವನ್ನು ಹರಾಜಿಗೆ ಹಾಕಿದ್ದರು. ಕಿಂಗ್ಫಿಶರ್ ಹೌಸ್ಗೆ ಆರಂಭಿಕ ಬೆಲೆ Rs 150 ಕೋಟಿ ನಿಗದಿ ಮಾಡಿದ್ದರೆ, ಕಿಂಗ್ಫಿಶರ್ ವಿಲ್ಲಾಕ್ಕೆ ಆರಂಭಿಕ ಬೆಲೆ Rs 85.29. ಆದರೆ ಒಂದು ವರುಷದಲ್ಲಿ ನಾಲ್ಕು ಸಲ ಹರಾಜು ಪ್ರಕ್ರಿಯೆಯನ್ನು ನಡೆಸಿದರೂ ಕಿಂಗ್ಫಿಶರ್ ಹೌಸ್ ಮಾರಾಟ ಆಗಲೇ ಇಲ್ಲ. ಪ್ರತೀ ಹರಾಜಿಗೂ ಮುನ್ನ ಬ್ಯಾಂಕ್ ಒಕ್ಕೂಟ ಆರಂಭಿಕ ಬೆಲೆಯನ್ನು ಕಡಿಮೆಗೊಳಿಸುತ್ತಲೇ ಹೋಗಿದೆ. ಮೊದಲ ಹರಾಜಿನಲ್ಲಿ Rs 150 ಕೋಟಿ ಇದ್ದದ್ದು, ಎರಡನೆಯದರಲ್ಲಿ 135 ಕೋಟಿ, ಮೂರನಯೆದರಲ್ಲಿ 115 ಕೋಟಿ ಹಾಗೂ ನಾಲ್ಕನೆಯ ಹರಾಜಿನಲ್ಲಿ 103 ಕೋಟಿ ರೂಪಾಯಿಗೆ ಇಳಿಯುತ್ತಾ ಬಂದರೂ ಯಾರೋಬ್ಬರೂ ಈ ಆಸ್ತಿಯನ್ನು ಖರೀದಿಸಲಿಲ್ಲ. ಇವತ್ತಿಗೂ ಅದು ಹಾಗೆಯೇ ಇದೆ. ಇನ್ನು ಗೋವಾದ ವಿಲ್ಲಾದ್ದು ಇದೇ ಕಥೆ. Rs 85.29ಗೆ ಆರಂಭವಾದ ಹರಾಜು ಪ್ರಕ್ರಿಯೆ ಮೂರನೇ ಸಲ 73 ಕೋಟಿ ರೂಪಾಯಿಗೆ ಇಳಿದರೂ ಯಾರೂ ಖರೀದಿಸಿಲ್ಲ. ಕೊನೆಗೆ ಹರಾಜನ್ನು ಕೈಬಿಟ್ಟು ಖಾಸಗಿ ಒಪ್ಪಂದವೊಂದನ್ನು ಮಾಡಿ, ಈ ವಿಲ್ಲಾವನ್ನು ನಟ ಸಚಿನ್ ಜೋಷಿಗೆ ಮಾರಲಾಗಿದೆ.
ಇನ್ನು ಕಿಂಗ್ಫಿಶರ್ ವಿಮಾನದ ಟ್ರೇಡ್ಮಾರ್ಕ್ ಮಾರಲು ಮಾಡಿದ ಪ್ರಯತ್ನಗಳೂ ವಿಫಲವಾಗಿವೆ. ಮಲ್ಯರ ಸುಮಾರು ಕಾರುಗಳು ಕೂಡಾ ಹರಾಜಿಗಿದ್ದವು. ಆದರೆ ಅವುಗಳಲ್ಲಿ ಕೆಲವು ಮಾರಾಟವಾಗಿದ್ದರೆ ಇನ್ನುಳಿದವು ಗಿರಾಕಿಯಿಲ್ಲದೇ ಬಾಕಿಯುಳಿದಿವೆ. ಮಾರಾಟ ಮಾಡಿ ಬಂದ ಹಣ ಕಾರುಗಳ ಮೂಲ ಬೆಲೆಯ ಹತ್ತು ಪರ್ಸೆಂಟೂ ಇಲ್ಲ. ಆನ್ಲೈನ್ ಹರಾಜಿನಲ್ಲಿ ಹುಬ್ಬಳ್ಳಿಯ ಹನುಮಂತ ರೆಡ್ಡಿ ಎನ್ನುವವರು ಮಲ್ಯರ ಎರಡು ಕಾರುಗಳಾದ ಹ್ಯೂಂಡೈ ಸೊನಾಟವನು ಬರೀ ನಲವತ್ತು ಸಾವಿರಕ್ಕೆ ಕೊಂಡುಕೊಂಡರೆ, ಹೊಂಡಾ ಅಕಾರ್ಡ್ ಕಾರನ್ನು ಒಂದು ಲಕ್ಷಕ್ಕೆ ಖರೀದಿಸಿದ್ದಾರೆ. ಅಂದರೆ ಒಂದೂವರೆ ಲಕ್ಷಕ್ಕೆ ಎರಡು ಲಕ್ಸುರಿ ಕಾರುಗಳು. ಜಫ್ತಿ ಮಾಡಿದ ಆಸ್ತಿ ಮಾರಾಟವಾದರೂ, ಬರುವ ಹಣ ಆ ಆಸ್ತಿಯ ಮೂಲಬೆಲೆಗಿಂತ ಎಷ್ಟೋ ಪಟ್ಟು ಕಡಿಮೆ. ಇದುವರೆಗೂ ನಡೆದ ಹರಾಜಿನಲ್ಲಿ ಅಲ್ಪಸ್ವಲ್ಪ ಹಣ ತಂದುಕೊಟ್ಟಿರೋದೆಂದರೆ UBHLನಲ್ಲಿ ವಿಜಯ್ ಮಲ್ಯ ಹೊಂದಿದ್ದ 74,04,932 ಶೇರುಗಳು. ಈ ಶೇರುಗಳನ್ನು ವಿಜಯ ಮಲ್ಯ ಯೆಸ್ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ಆ ಸಾಲದ ಹೆಚ್ಚಿನ ಮೊತ್ತವನ್ನು ಪಾವತ್ತಿಸಿದ್ದರಿಂದ ಆ ಶೇರುಗಳನ್ನು ಜಫ್ತಿ ಮಾಡಿ ಮಾರಾಟ ಮಾಡುವಂತಿಲ್ಲ ಎಂದು ಯೆಸ್ ಬ್ಯಾಂಕ್ ಕೋರ್ಟ್ ಮೊರೆಹೋಗಿತ್ತು. ಕೊನೆಗೂ ಕರ್ನಾಟಕ ಹೈಕೋರ್ಟ್ ED ಪರ ತೀರ್ಪನ್ನು ಕೊಟ್ಟು ಈ ಶೇರುಗಳನ್ನು ಯೆಸ್ ಬ್ಯಾಂಕ್ surrender ಮಾಡಲು ಹೇಳಿತ್ತು.
ED ಪ್ರಕಾರ ಈ ಶೇರ್ ಗಳ ಬೆಲೆ ಸುಮಾರು ಏಳು ಸಾವಿರ ಕೋಟಿ. ಆದರೆ ಅದನ್ನು ಮಾರಾಟ ಮಾಡಿದಾಗ ಬಂದಿದ್ದು ಕೇವಲ ಒಂದು ಸಾವಿರ ಕೋಟಿ. ಮಲ್ಯ ಓಡಿ ಹೋಗಿ ನಾಲ್ಕು ವರುಷದ ನಂತರನೂ ಆತನ ಆಸ್ತಿ ಮಾರಾಟ ಮಾಡಿ ಬಂದಿರೋದು ಕೇವಲ ಒಂದು ಸಾವಿರದ ಇನ್ನೂರು ಕೋಟಿಯಷ್ಟು ಮಾತ್ರ. ಇನ್ನು ನೀರವ್ ಮೋದಿಯ ಆಸ್ತಿ, ವಜ್ರ, ಚಿನ್ನ ಮುಂತಾದವುಗಳನ್ನು ಮುಟ್ಟುಗೋಲು ಹಾಕಿದಾಗ ಜಾರಿ ನಿರ್ದೇಶನಾಲಯ ಅದರ ಒಟ್ಟು ಮೌಲ್ಯ ಆರು ಸಾವಿರ ಕೋಟಿ ಎಂದಿತ್ತು. ಆದರೆ ಆ ನಂತರ ಅದರ ಮೌಲ್ಯಮಾಪನ ನಡೆದು ಅವುಗಳ ಮೌಲ್ಯ ಎರಡು ಸಾವಿರ ಕೋಟಿಗಿಂತ ಹೆಚ್ಚಿಲ್ಲ ಎಂದು ತಿಳಿದುಬಂದಿದೆ. ನೀರವ್ ಮೋದಿ ಹಾಗೂ ಚೋಕ್ಸಿಯ ಒಂದೇ ಒಂದು ಆಸ್ತಿ ಇದುವರೆಗೂ ಮಾರಾಟವಾಗಿಲ್ಲ. ಜಫ್ತಿ ಮಾತ್ರ ಮಾಡಲಾಗಿದೆ.
ಒಮ್ಮೆ ಜಫ್ತಿ ಮಾಡಿದ ಆಸ್ತಿಯನ್ನು ಸರಕಾರ ಹಾಗೆಯೇ ಮಾರಲಾಗುವುದಿಲ್ಲ. ಬ್ಯಾಂಕಿಗೆ ಅಡವಿಟ್ಟ ಆಸ್ತಿಯನ್ನು ಮಾರಾಟ ಮಾಡಿದಂತಲ್ಲ ಜಾರಿ ನಿರ್ದೇಶನಾಲಯ ಜಫ್ತಿ ಮಾಡಿದ ಅಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆ. ಜಫ್ತಿ ಮಾಡಿದ ಆಸ್ತಿಯನ್ನು ಸಾಲಗಾರ ಬಿಡಿಸಿಕೊಳ್ಳುವವರೆಗೆ ಇಲ್ಲವಾದರೆ ಅವುಗಳ ಹರಾಜು ಆಗುವ ತನಕ ಸರಕಾರ ಈ ಆಸ್ತಿಯನ್ನು ನಿರ್ವಹಣೆ ಮಾಡಬೇಕು. ED ಹೇಳಿಕೊಂಡಿರುವಂತೆ ಅದು ಕಳೆದ ಕೆಲ ವರುಷಗಳಲ್ಲಿ ಅನೇಕ ಪ್ರಕರಣಗಳಲ್ಲಿ ಸುಮಾರು Rs 18,000 ಕೋಟಿಯಷ್ಟು ಆಸ್ತಿಯನ್ನು ಜಫ್ತಿ ಮಾಡಿದೆ. ಆದರೆ ಅದರ ನಿರ್ವಹಣೆ ಸಾಧ್ಯವಾಗದೇ ಕಳೆದ ವರುಷ ಸರಕಾರ ಈ ಆಸ್ತಿಗಳನ್ನು ನಿರ್ವಹಿಸಲು ಏಜೆನ್ಸಿಗಳನ್ನು ಟೆಂಡರ್ ಮುಖಾಂತರ ಕರೆಯುವ ನಿರ್ಧಾರ ಮಾಡಿತ್ತು. ಆದರೆ ಅದು ಇದುವರೆಗೂ ಕೂಡಿಬಂದಿಲ್ಲ.
ಹೀಗೆ ಮುಟ್ಟುಗೋಲಾದ ಆಸ್ತಿಯನ್ನು ಆ ಆಸ್ತಿಯ ಮಾಲಿಕರನ್ನು ಕೋರ್ಟ್ ಅಪರಾಧಿ ಎಂದು ಘೋಷಿಸುವ ತನಕ ಮಾರುವಂತಿಲ್ಲ. ಆ ಆಸ್ತಿಯ ದಾಖಲೆಗಳನ್ನು ವಿತ್ತ ಸಚಿವಾಲಯದ ಕಂದಾಯ ವಿಭಾಗಕ್ಕೆ ಕಳುಹಿಸಬೇಕು. ಅದಾದ ನಂತರ ಆರೋಪಿಗೆ ಈ ನಿರ್ಣಯದ ವಿರುದ್ದ ಅಪೀಲ್ ಮಾಡಲು 150 ದಿನಗಳ ಕಾಲಾವಧಿಯಿದೆ. ಆರೋಪಿಯ ವಿರುದ್ಧ ತೀರ್ಪು ಬಂದರೆ ಆತ/ಆಕೆ Appellate Tribunal ಕದ ತಟ್ಟಬಹುದು. ಅಲ್ಲೂ ಅವರ ವಿರುದ್ಧ ತೀರ್ಪು ಬಂದರೆ ಜಾರಿ ನಿರ್ದೇಶನಾಲಯ ಆ ಆಸ್ತಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಆದಾದ ನಂತರ ಅರೋಪಿಯನ್ನು ಸುಪ್ರೀಂ ಕೋರ್ಟ್ ಅಂತಿಮವಾಗಿ ಅಪರಾಧಿಯೆಂದು ಘೋಷಿಸುವ ತನಕ ಕಾಯಬೇಕು ಅದನ್ನು ಮಾರಲು. ಅಂದರೆ ಕೆಳ ನ್ಯಾಯಾಲಯಗಳು, ಹೈಕೋರ್ಟ್ ಹೀಗೆ ಎಲ್ಲಾ ಕೋರ್ಟುಗಳಲ್ಲಿ ಆರೋಪಿಯ ವಿರುದ್ದ ತೀರ್ಪು ಬಂದು, ಸುಪ್ರೀಂ ಕೋರ್ಟ್ ಕೂಡಾ ಕೆಳ ನ್ಯಾಯಾಲಯಗಳ ತೀರ್ಪನ್ನು ಎತ್ತಿಹಿಡಿದರೆ ಮಾತ್ರ ಮುಟ್ಟುಗೋಲಾದ ಆಸ್ತಿಯನ್ನು ಮಾರಾಟ ಮಾಡಬಹುದು. Write-off ಆದ್ರೂ ರಿಕವರಿ ಮಾಡ್ತಾರೆ, ಆಸ್ತಿ ಮುಟ್ಟುಗೋಲು ಮಾಡಿ ಹಣ ವಸೂಲಿಯಾಗುತ್ತೆ ಎನ್ನುವುದೆಲ್ಲಾ technicalities ಮಾತ್ರವೇ ಹೊರತು ವಾಸ್ತವ ಅಲ್ಲ. ಅದಕ್ಕಿರುವ ಕಾನೂನು ಕಾರ್ಯವಿಧಾನ ಎಲ್ಲವೂ ಮುಗಿಯುವಾಗ ಅದೆಷ್ಟೋ ವರುಷಗಳು ಸಂದಿರುತ್ತವೆ. Write-off ಆದ ಸಾಲ ರಿಕವರಿಯ ಸತ್ಯದಷ್ಟೇ ದೊಡ್ಡ ಸತ್ಯ ಆಸ್ತಿ ಮುಟ್ಟುಗೋಲಿನಿಂದ ಸಾಲ ವಸೂಲಿಯಾಗುತ್ತೆ ಎನ್ನುವುದು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












