ಭಟ್ಕಳದಲ್ಲಿ ಒಂದೇದಿನ 12 ಮಂದಿಗೆ ಕೊರೋನಾ: ಸೋಂಕು ವಾಹಕವಾಗಿ ಪಡೀಲ್ ನ ನ್ಯೂರೋ ಆಸ್ಪತ್ರೆ

0
1218

ಸನ್ಮಾರ್ಗ ವಾರ್ತೆ

ಬೆಂಗಳೂರು ಮೇ 8- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ 12 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, ಈ ಸೋಂಕಿಗೂ ಮಂಗಳೂರಿನ ಪಡೀಲ್ ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆಗೂ ಸಂಬಂಧ ಇರುವುದು ಮತ್ತಷ್ಟು ಗಾಬರಿಗೆ ಕಾರಣವಾಗಿದೆ.

ಭಟ್ಕಳದ ಓರ್ವ ಮಹಿಳೆ ತನ್ನ 5 ತಿಂಗಳ ಮಗುವಿನ ಚಿಕಿತ್ಸೆಗಾಗಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಂದಿದ್ದರು. ಅವರ ಜೊತೆ ಪತಿ ಮತ್ತು 18 ವರ್ಷದ ತಂಗಿ ಕೂಡ ಇದ್ದರು. ಚಿಕಿತ್ಸೆ ಪಡೆದು ಅವರು ಮರಳಿ ಭಟ್ಕಳ ಸೇರಿಕೊಂಡಿದ್ದರು. ಆದರೆ ಮೇ ಒಂದರಂದು 18 ವರ್ಷದ ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂಡ ಹಿನ್ನೆಲೆಯಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಮೇ ಐದರಂದು ಅದರ ವರದಿ ಬಂದಿದ್ದು ಯುವತಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಎಲ್ಲ ಸದಸ್ಯರನ್ನು ಮತ್ತು ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಿ ಅವರೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ಅವರೆಲ್ಲರ ವರದಿ ಪಾಸಿಟಿವ್ ಬಂದಿದೆ.

ಆ ಯುವತಿಯ ಸಂಪರ್ಕಕ್ಕೆ ಬಂದಿರುವ ಆಕೆಯ ಅಕ್ಕ, ಅಕ್ಕನ ಹೆಣ್ಣುಮಗು, ಅಜ್ಜ, ಅಜ್ಜಿ, ಚಿಕ್ಕಮ್ಮ ,ಇಬ್ಬರು ಗೆಳತಿಯರು ಸೇರಿದಂತೆ ಒಟ್ಟು ಇಬ್ಬರು ಪುರುಷರು ಮತ್ತು ಒಂಬತ್ತು ಮಹಿಳೆಯರಿಗೆ ಸೋಂಕು ದೃಢ ಗೊಂಡಿದೆ. ಇದರಲ್ಲಿ ಐದು ತಿಂಗಳ ಮಗು, ಮೂರು ವರ್ಷದ ಮಗು, 11 ವರ್ಷದ ಬಾಲಕಿ ಕೂಡ ಸೇರಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಗುರುವಾರ ಸಂಜೆ 5ರಿಂದ ಶುಕ್ರವಾರ ಮಧ್ಯಾಹ್ನ ವರೆಗೆ 45 ಹೊಸ ಸೋಂಕು ದೃಡಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋರೋನಾ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದ್ದು ಇವರಲ್ಲಿ 371 ಮಂದಿ ಗುಣಮುಖರಾಗಿದ್ದಾರೆ. 30 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.