ಸನ್ಮಾರ್ಗ ವಾರ್ತೆ
ನವದೆಹಲಿ,ಮೇ.26:30 ರ ಹರೆಯದ ಅಮೀರ್ ಖಾನ್ ಅವರು ಮೇ 13 ರಂದು ಭಾರತಕ್ಕೆ ಮರಳಿದರು. ದುಬೈನಲ್ಲಿ ಉತ್ಪನ್ನ ಸಲಹೆಗಾರರಾಗಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದ ತಮ್ಮ ತಾಯಿಯೊಂದಿಗೆ ಸಮಯ ಕಳೆಯಲು ಕೆಲಸವನ್ನೇ ತ್ಯಜಿಸಿ ತಾಯ್ನಾಡಿಗೆ ಮರಳಿದ್ದರು. ಆದರೆ, ದೆಹಲಿಯಲ್ಲಿ ಅವರ ಕ್ವಾರಂಟೈನ್ ಅವಧಿ ಮುಗಿಯುವ ಮೊದಲೇ ಅವರ ತಾಯಿಯ ಸಾವಿನ ಸುದ್ದಿಯು ಅವರಿಗೆ ಲಭಿಸಿತು. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು, ತಾಯಿಯ ಮುಖವನ್ನು ನೋಡಲೂ ಕೂಡ ಅಮೀರ್ಗೆ ಸಾಧ್ಯವಾಗಲಿಲ್ಲ.
ಮೇ 13 ರಂದು ಭಾರತಕ್ಕೆ ಮರಳಿದ ಅಮೀರ್- “ನಾನು ಈ ಸುದ್ದಿಯನ್ನು ಅಧಿಕಾರಿಗಳಿಗೆ ತಿಳಿಸಿದೆ. ಮಾರ್ಗಸೂಚಿಯಲ್ಲಿ ಬದಲಾವಣೆಯಾಗಿದೆ ಎಂದೂ ನಾನು ಅವರಿಗೆ ಹೇಳಿದೆ, ನನ್ನನ್ನು ಹೋಗಲು ಬಿಡಿ, ನಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ ಎಂದು ನಾನು ಅವರಲ್ಲಿ ವಿನಂತಿಸಿದೆ. ಆದರೆ ಇದಾವುದೂ ಉಪಯೋಗಕ್ಕೆ ಬರಲಿಲ್ಲ. ಈ ಸೋಂಕಿನೊಂದಿಗೆ ಬದುಕಲು ನಾನು ಕಲಿಯುತ್ತೇನೆ, ಆದರೆ ಭಾವನಾತ್ಮಕವಾಗಿ ನನಗಾದ ಹಾನಿಯನ್ನು ಅರಗಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ನಾನು ಕಳೆದ ಎರಡು ತಿಂಗಳುಗಳನ್ನು ಒಂದು ಉದ್ದೇಶಕ್ಕಾಗಿ ಮಾತ್ರ ಕಳೆದೆ….ನನ್ನ ತಾಯಿಯೊಂದಿಗೆ ಸ್ವಲ್ಪ ಸಮಯವಾದರೂ ಕಳೆಯಬೇಕು ಎಂದು…ಇದಕ್ಕಾಗಿ ನಾನು ನನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಬಂದಿದ್ದೆ.
ಹಲವು ಬಾರಿ ರಾಯಭಾರಿ ಕಚೇರಿಗೆ ಚಕ್ಕರ್ ಹೊಡೆದ ನಂತರ, ನಾನು ಮೇ 13 ರಂದು, ದುಬೈನಿಂದ ದೆಹಲಿಗೆ ವಿಮಾನ ಹತ್ತಿದೆ. ಇಲ್ಲಿಗೆ ಬಂದಾಗ ನನ್ನನ್ನು 14 ದಿನಗಳ ಕ್ವಾರಂಟೈನ್ಗಾಗಿ ಹೋಟೆಲ್ಗೆ ಕಳುಹಿಸಲಾಯಿತು. ನನ್ನ ನಿರ್ಗಮನ ಬಹಳ ಮುಖ್ಯ ಎಂದು ನಾನು ಕ್ವಾರಂಟೈನ್ನ ಎಂಟನೇ ದಿನದಂದು ಎಸ್ಡಿಎಂಗೆ ಹೇಳಿದೆ. ವಿಶೇಷ ಅನುಮತಿ ತೆಗೆದುಕೊಳ್ಳಬೇಕೆಂದು ಅವರು ಹೇಳಿದರು. ಕೆಲವು ದಿನಗಳ ನಂತರ, ಫೋನ್ ಮೂಲಕ ತಾಯಿ ತೀರಿಕೊಂಡರೆಂಬ ಸುದ್ದಿ ನನಗೆ ಸಿಕ್ಕಿತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾದರೂ ನನಗೆ ಅನುಮತಿ ನೀಡುವಂತೆ ನಾನು ಅಧಿಕಾರಿಗಳನ್ನು ಕೇಳಿಕೊಂಡೆ, ಆದರೆ ಅವರು ಅದಕ್ಕೂ ಅನುಮತಿ ಲಭಿಸಲಿಲ್ಲ.
ನಾನು ಮಾರ್ಚ್ನಲ್ಲಿ ಊರಿಗೆ ಬರಲು ನಿರ್ಧರಿಸಿದ್ದೆ. ಆದರೆ ಕೊರೋನ ವೈರಸ್ ಸೋಂಕಿನಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿತ್ತು. ರಾಯಭಾರ ಕಚೇರಿಯಿಂದ ಅನುಮತಿ ಪಡೆದ ನಂತರ ಭಾರತಕ್ಕೆ ಬರಲು ನನಗೆ ಅನುಮತಿ ದೊರೆತಾಗ, ಅದನ್ನು ನನ್ನ ಕಚೇರಿಯಲ್ಲಿ ತಿಳಿಸಿದೆ. ಭಾರತಕ್ಕೆ ಬರಲು 14 ದಿನಗಳನ್ನು ಕ್ವಾರಂಟೈನ್ನಲ್ಲಿ ಕಳೆಯಬೇಕಾಗುತ್ತದೆ ಎಂದು ತಿಳಿದಿದ್ದರೂ, ಹಿರಿಯ ಅಧಿಕಾರಿಗಳು ಕೇವಲ 20 ದಿನಗಳ ರಜೆ ನೀಡಿದ್ದರು. ಇದರ ನಂತರ ನಾನು ಕೆಲಸವನ್ನು ತ್ಯಜಿಸಲು ನಿರ್ಧರಿಸಿ ಊರಿಗೆ ಮರಳಿ ಬಂದೆ. ನನ್ನ ತಾಯಿಯ ಬಳಿ ಬಹಳ ಕಡಿಮೆ ಸಮಯ ಉಳಿದಿದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಅಮೀರ್ ನುಡಿದರು.
ಅಮೀರ್ ಅವರ ತಾಯಿ ಉತ್ತರ ಪ್ರದೇಶದ ರಾಂಪುರದಲ್ಲಿ ಶನಿವಾರ ನಿಧನರಾದರು. ಅಮೀರ್ ಆಗ ದೆಹಲಿಯಲ್ಲಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸುತ್ತಿದ್ದರು.












